ರಾಯಚೂರು: ದಾಸ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದು ಪುರುಷರೇ ಆದರೂ ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಮಹಿಳೆಯರ ಪಾತ್ರ ಅವಿಸ್ಮರಣೀಯ. ಮಹಿಳೆಯರಿಂದ ದಾಸ ಸಾಹಿತ್ಯ ಮತ್ತಷ್ಟು ಬಲಗೊಂಡಿತು ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಅಭಿಪ್ರಾಯಪಟ್ಟರು.
ಗುಲ್ಬರ್ಗ ವಿಶ್ವವಿದ್ಯಾಲಯದ ದಾಸಸಾಹಿತ್ಯ ಪೀಠ ಹಾಗೂ ಸ್ನಾತಕೋತ್ತರ ಕೇಂದ್ರದ ಸಹಯೋಗದಲ್ಲಿ ಗುರುವಾರ ನಗರದ ಟ್ಯಾಗೋರ್ ಶಿಕ್ಷಣ ಸಂಸ್ಥೆಯ ಎಸ್‌ಆರ್‌ಕೆ ಬಿಇಡಿ ಕಾಲೇಜಿನಲ್ಲಿ ಆಯೋಜಿಸಿದ್ದ ಮಹಿಳಾ ದಾಸಸಾಹಿತ್ಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಹರಿದಾಸ ಸಾಹಿತಿಗಳು ಕುಲಭೇದ ಎಣಿಸದೆ ಕೀರ್ತನೆಗಳ ಮೂಲಕ ಜನರಲ್ಲಿ ಸಮಾನತೆ ತತ್ವ ಸಾರಿದರು. ಸರಳ ಭಾಷೆಯಲ್ಲಿ ಸುಂದರ ಸಾಹಿತ್ಯ ರಚಿಸಿ ಆ ಮೂಲಕ ಬೋಧಿಸಿದರು. ಜಗನ್ನಾಥ ದಾಸರು ಇಡೀ ವಿಶ್ವಕ್ಕೆ ಹರಿಕತಾಮೃತ ಕೊಡುಗೆ ನೀಡಿದ್ದಾರೆ. ರಾಯಚೂರು ಜಿಲ್ಲೆ ಹರಿದಾಸರ ತವರೂರು ಎನ್ನುವುದು ನಿಜಕ್ಕೂ ವಿಶೇಷ. ಈ ನಾಡಿನಲ್ಲಿ ಅನೇಕಾನೇಕ ದಾಸರು ಆಗಿ ಹೋಗಿದ್ದಾರೆ. ಗೋಪಾಲದಾಸರು, ವಿಜಯದಾಸರು, ಜಗನ್ನಾಥದಾಸರು, ಪ್ರಾಣೇಶದಾಸರು ಸೇರಿದಂತೆ ಅವರ ಶಿಷ್ಯ ಪರಂಪರೆ 164ಕ್ಕೂ ಹೆಚ್ಚು ಹರಿದಾಸರ ಮುಖ್ಯ ಕಾರ್ಯಕ್ಷೇತ್ರ ಇದಾಗಿದೆ ಎಂದು ಶ್ಲಾಘಿಸಿದರು.
ಇದು ಪುರಂದರ ದಾಸರು ಸಂಚರಿಸಿದ ನಾಡು, ಗೋಪಾಲದಾಸರ ಜನ್ಮನೆಲೆಯಾಗಿದೆ. ದಾಸರು ಸಮಾಜದ ಉದ್ಧಾರಕ್ಕೆ ತಮ್ಮ ಬದುಕನ್ನೇ ತ್ಯಾಗ ಮಾಡಿದರು. ಅಂಥ ದಾಸರ ಸ್ಮರಣೆ ಸ್ತುತ್ಯರ್ಹ. ಶ್ರೀಮಠ ಕೂಡ ದಾಸಸಾಹಿತ್ಯ ಉಳಿವಿಗೆ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ. ಇದು ಮುಂದೆಯೂ ಸಾಗಲಿದೆ. ಹರಿದಾಸ ಸಾಹಿತ್ಯ ನಿಂತ ನೀರಾಗಬಾರದು. ಸಾಹಿತ್ಯವು ಒಂದು ಜನಾಂಗಕ್ಕೆ ಸೀಮಿತವಾಗಿಲ್ಲ. ವಿಶ್ವದ ಸ್ವತ್ತಾಗಲಿ ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಹರಿದಾಸ ಸಾಹಿತ್ಯ ವಿಭಾಗದ ನಿವೃತ್ತ ಮುಖ್ಯಸ್ಥೆ ಡಾ| ಟಿ.ಎಸ್.ನಾಗರತ್ನ ಮಾತನಾಡಿ, ಸುಮಾರು 243 ಮಹಿಳಾ ದಾಸ ಸಾಹಿತಿಗಳನ್ನು ಗುರುತಿಸಲಾಗಿದೆ. ದಾಸ ಸಾಹಿತ್ಯ ಮಹಿಳೆಯರ ಹೊರತಾಗಿಲ್ಲ. ಸಾಹಿತ್ಯದಲ್ಲಿ ಹೆಣ್ಣಿನ ಪಾತ್ರ ದಾಖಲಾಗಿದ್ದು, 12ನೇ ಶತಮಾನದಲ್ಲಿ. ಅದರ ಬಳಿಕ ಸುಮಾರು 18ನೇ ಶತಮಾನದಲ್ಲಿ ದಾಖಲಾಯಿತು. ಆಗ ಚಾಲ್ತಿಯಲ್ಲಿದ್ದ ದಾಸ ಸಾಹಿತ್ಯಕ್ಕೆ ಮಹಿಳೆಯರು ಅಗಾಧ ಕೊಡುಗೆ ನೀಡಿದ್ದಾರೆ ಎಂದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ| ಪರಿಮಳ ಅಂಬೇಕರ್ ಅಧ್ಯಕ್ಷತೆ ವಹಿಸಿದ್ದರು. ಗುಲ್ಬರ್ಗ ವಿವಿ ಕುಲಸಚಿವ ಪ್ರೊ| ಸಿ.ಸೋಮಶೇಖರ, ಸಿಂಡಿಕೇಟ್ ಸದಸ್ಯ ವಿಜಯ ಭಾಸ್ಕರ, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್. ಕೆ.ಅಮರೇಶ, ಕಾರ್ಯದರ್ಶಿ ದರೂರು ಬಸವರಾಜ, ಥಾಮಸ್, ಗಿರೀಶ ಕನಕವೀಡು, ಬಿ.ಎಸ್.ನಾಗರತ್ನ, ಡಾ| ಜಯಲಕ್ಷ್ಮೀ ಮಂಗಳಾಮೂರ್ತಿ ಸೇರಿ ಇತರರು ಉಪಸ್ಥಿತರಿದ್ದರು.