Advertisement

ರಾಯಚೂರು:ರಾಯಚೂರು ಕೃಷಿ ವಿವಿಯಿಂದಲೂ ಗೌರವ ಡಾಕ್ಟರೇಟ್‌

05:54 PM Jan 18, 2024 | Team Udayavani |

ಉದಯವಾಣಿ ಸಮಾಚಾರ
ರಾಯಚೂರು: ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳು ಈಗಾಗಲೇ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿಕೊಂಡು ಬರುತ್ತಿವೆ. ರಾಯಚೂರಿನಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪನೆಯಾಗಿ 15 ವರ್ಷ ಕಳೆದ ಮೇಲೆ ಮೊದಲ ಬಾರಿ ಗೌಡಾ( ಗೌರವ ಡಾಕ್ಟರೇಟ್‌ )ಪ್ರದಾನ ಮಾಡಲು ಚಿಂತನೆ ನಡೆಸಿದ್ದು, ಕಲ್ಯಾಣ ಕರ್ನಾಟಕ ಭಾಗದ ಸಾಧಕರಿಗೆ ವಿಶೇಷ ಗೌರವ ನೀಡಲು ಮುಂದಾಗಿದೆ.

Advertisement

ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ವಿಶ್ವವಿದ್ಯಾಲಯಗಳು ಈ ವಿಶೇಷ ಪುರಸ್ಕಾರವನ್ನು ನೀಡಿಕೊಂಡು ಬರುತ್ತಿದ್ದರೂ, ಕೃಷಿ ವಿವಿ ಮಾತ್ರ ಈ ವಿಚಾರದಲ್ಲಿ ದೂರವೇ ಉಳಿದಿತ್ತು. ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಶ್ರೇಷ್ಠ ಕೃಷಿಕ, ಶ್ರೇಷ್ಠ ಕೃಷಿಕ ಮಹಿಳೆ ಪ್ರಶಸ್ತಿ ಮಾತ್ರ ನೀಡಲಾಗುತ್ತಿತ್ತು. ಈಗ ಕೃಷಿ ಕ್ಷೇತ್ರದಲ್ಲೇ ಸೇವೆ ಸಲ್ಲಿಸಿದವರನ್ನು ಗುರುತಿಸಿ ಗೌರವ ಡಾಕ್ಟರೇಟ್‌
ನೀಡಬೇಕು ಎನ್ನುವ ನಿರ್ಧಾರಕ್ಕೆ ಬಂದಿದೆ. ಸಾಧಕರ ಆಯ್ಕೆ ಪ್ರಕ್ರಿಯೆ ನಡೆದಲ್ಲಿ ಫೆ.29ರಂದು ನಡೆಯುವ ಘಟಿಕೋತ್ಸವದಲ್ಲಿ
ಮೊದಲ ಬಾರಿಗೆ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡುವ ಸಾಧ್ಯತೆಗಳಿವೆ.

ಕ-ಕ ಭಾಗಕ್ಕೆ ಆದ್ಯತೆ: ಮೊದಲ ಬಾರಿಗೆ ಗೌಡಾ ನೀಡಲು ಮುಂದಾಗಿರುವ ವಿವಿ ಆಡಳಿತ ಮಂಡಳಿ ಆರಂಭದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಾಧಕರಿಗೆ ನೀಡಲು ನಿರ್ಧರಿಸಿದೆ. ವಿವಿಯ ಕಾರ್ಯ ವ್ಯಾಪ್ತಿಯೂ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳನ್ನು ಒಳಗೊಂಡಿದ್ದು, ಈ ಭಾಗದ ಸಾಧಕರಿಗೇ ಗೌರವ ಸಂದಬೇಕು ಎನ್ನುವ ಯೋಚನೆ ಮಾಡಲಾಗಿದೆ. ಈಗಾಗಲೇ ಬೆಂಗಳೂರು, ಧಾರವಾಡ ಕೃಷಿ ವಿವಿಗಳು ವಿವಿಧ ಕ್ಷೇತ್ರಗಳ ಗಣ್ಯರಿಗೆ ಗೌಡಾ ನೀಡುತ್ತಾ ಬಂದಿವೆ.

ವಿಶೇಷ ಆಯ್ಕೆ ಸಮಿತಿ ರಚನೆ: ಗೌರವ ಡಾಕ್ಟರೇಟ್‌ ಪದವಿ ನೀಡಲು ಅರ್ಹರನ್ನು ಆಯ್ಕೆ ಮಾಡಲು ವಿವಿ ಆಡಳಿತ ಮಂಡಳಿ ವಿಶೇಷ ಆಯ್ಕೆ ಸಮಿತಿ ರಚಿಸಲಿದೆ. ಈ ಸಮಿತಿ ಈ ಭಾಗದ ಐದಾರು ಸಾಧಕರನ್ನು ಆಯ್ಕೆ ಮಾಡಿ ರಾಜ್ಯಪಾಲರ ಕಚೇರಿಗೆ ಕಳುಹಿಸಲಿದೆ. ಅಲ್ಲಿ ಉನ್ನತ ಮಟ್ಟದ ಆಯ್ಕೆ ಸಮಿತಿ ಒಬ್ಬರ ಹೆಸರನ್ನು ಅಂತಿಮಗೊಳಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಿದೆ. ಜನವರಿ ಅಂತ್ಯದೊಳಗೆ ಆಯ್ಕೆ ಪ್ರಕ್ರಿಯೆ ಮುಗಿಸುವ ಸಾಧ್ಯತೆಗಳಿವೆ.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಮೊದಲ ಬಾರಿಗೆ ಗೌರವ ಡಾಕ್ಟರೇಟ್‌ ನೀಡಲು ಚಿಂತನೆ ನಡೆಸಿದೆ. ಇದಕ್ಕಾಗಿ ಶೀಘ್ರದಲ್ಲೇ ಆಯ್ಕೆ ಸಮಿತಿ ರಚಿಸಲಾಗುವುದು. ರಾಜ್ಯಪಾಲರ ಕಚೇರಿಗೆ ಅರ್ಹರ ಪಟ್ಟಿ ಕಳುಹಿಸಲಾಗುವುದು. ಅಲ್ಲಿನ ಉನ್ನತ ಮಟ್ಟದ ಸಮಿತಿ ಒಬ್ಬರ ಹೆಸರು ಅಂತಿಮಗೊಳಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಿದೆ. ಎಲ್ಲ ಸುಸೂತ್ರವಾಗಿ
ನಡೆದಲ್ಲಿ ಬರುವ ವಿವಿಯ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗುವುದು.
ವೀರನಗೌಡ, ಕುಲಸಚಿವ, ಕೃಷಿ ವಿವಿ, ರಾಯಚೂರು

Advertisement

*ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next