ರಾಯಚೂರು: ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಜಿಲ್ಲೆಯ ಗೂಗಲ್ ಬ್ರಿಡ್ಜ್ ಕಂ ಬ್ಯಾರೇಜ್‌ನ ಸ್ಥಬ್ಧಚಿತ್ರ ಮಿಂಚಲಿದ್ದು, ಅದರೊಟ್ಟಿಗೆ ಪ್ರಧಾನಮಂತ್ರಿ ಕೃಷಿ ಸಿಂಚನ ಮತ್ತು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಗಳ ಮಾಹಿತಿಯೂ ಇರಲಿದೆ.
ಈ ವರ್ಷವೂ ಜಿಪಂನಿಂದ ಸ್ಥಬ್ಧಚಿತ್ರ ನಿರ್ಮಾಣಗೊಳ್ಳುತ್ತಿದ್ದು, ಸೆ.21ರಿಂದ ನಿರ್ಮಾಣ
ಕಾರ್ಯ ಶುರುವಾಗಲಿದೆ. ಕಳೆದ ವರ್ಷ ದೇವದುರ್ಗ ತಾಲೂಕಿನ ಕೊಪ್ಪರದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಮಾದರಿ ಪ್ರದರ್ಶಿಸಲಾಗಿತ್ತು. ಆದರೆ, ಈ ಬಾರಿ ಕೃಷಿ ಮತ್ತು ನೀರಾವರಿಗೆ ಸಂಬಂಧಿಸಿದ ಯೋಜನೆಗಳ ಮಾದರಿಗಳನ್ನು ಸಿದ್ಧಪಡಿಸಲಾಗುತ್ತಿದೆ.
ಹೀಗಿರಲಿದೆ ಸ್ಥಬ್ಧಚಿತ್ರ: ಜಿಲ್ಲೆಯ ಪ್ರಮುಖ ಬ್ರಿಡ್ಜ್ ಕಂ ಬ್ಯಾರೇಜ್‌ಗಳಲ್ಲಿ ಒಂದಾಗಿರುವ ಗೂಗಲ್ ಬ್ಯಾರೇಜ್ ಈ ಬಾರಿ ಪ್ರಧಾನ ಆಕರ್ಷಣೆಯಾಗಿರಲಿದೆ. ಈ ಬ್ಯಾರೇಜ್ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದು, ವಿವಿಧ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಆಗುತ್ತದೆ. ಅಲ್ಲದೇ, ಸಾಕಷ್ಟು ರೈತರು ಬ್ಯಾರೇಜ್ ಆಧರಿಸಿ ಕೃಷಿ ಮಾಡಿಕೊಂಡಿದ್ದಾರೆ.
ಸ್ಥಬ್ಧಚಿತ್ರದ ಮುಂಭಾಗದಲ್ಲೇ ಗೂಗಲ್ ಬ್ಯಾರೇಜ್ ಮಾದರಿ ಇರಲಿದೆ. ಅದರ ಹಿಂಭಾಗದಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕೃಷಿ ಸಿಂಚನ ಯೋಜನೆಗೆ ಸಂಬಂಧಿಸಿದ ಮಾದರಿ ಇರಲಿದೆ. ಈ ಯೋಜನೆಯಡಿ ರೈತರಿಗೆ ಸಿಗುವ ಸೌಲಭ್ಯಗಳ ಮಾಹಿತಿ ಒಳಗೊಂಡಿರಲಿದೆ. ಇನ್ನು ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಿಸಿದಂತೆ ಕೂಲಿ ಕಾರ್ಮಿಕರು, ಕೆಲಸ ಕಾರ್ಯಗಳ ಬಗ್ಗೆ ವಿವರಣೆ ಇರಲಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿಯಡಿ ನಿರೀಕ್ಷೆ ಮೀರಿ ಮಾನವ ದಿನಗಳ ಸೃಜನೆ ಮಾಡಲಾಗಿತ್ತು. ಅದರ ಕುರಿತು ಮಾಹಿತಿ ಇರಲಿದೆ ಎನ್ನುತ್ತಾರೆ ನೋಡಲ್ ಅಧಿಕಾರಿ ಬಸವರಾಜ ಯಕಂಚಿ.