ರಾಯಚೂರು: ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಿಸುವ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಕ್ಕಳು ಮಣ್ಣಿನಲ್ಲಿ ಚಿಕ್ಕ ಚಿಕ್ಕ ಗಣೇಶ ಮೂರ್ತಿಗಳನ್ನು ತಯಾರಿಸಿ ಗಮನ ಸೆಳೆದರು.
ಗ್ರೀನ್ ರಾಯಚೂರು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ನವೋದಯ ಶಿಕ್ಷಣ ಸಂಸ್ಥೆಗಳ ಸಮೂಹ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ನಗರಸಭೆ ಸಹಯೋಗಲ್ಲಿ ರವಿವಾರ ನಗರದ ಮನ್ಸಲಾಪುರ ರಸ್ತೆಯಲ್ಲಿನ ಕೊಂಡ ಕೃಷ್ಣಮೂರ್ತಿ ಅವರ ಮಿಲ್ನಲ್ಲಿ ಉಚಿತ ಮಣ್ಣಿನ ಗಣೇಶ ತಯಾರಿಸುವ ಕಾರ್ಯಾಗಾರ ಆಯೋಜಿಸಲಾಗಿತ್ತು. ಸಾರ್ವಜನಿಕರು ತಮ್ಮ ಮಕ್ಕಳನ್ನು ಕರೆ ತಂದರೆ, ವಿವಿಧ ಶಾಲೆಯ ಮಕ್ಕಳು ಕೂಡ ಪಾಲ್ಗೊಂಡು ಗಣೇಶ ಮೂರ್ತಿಗಳನ್ನು ತಯಾರಿಸಿ ಸಂಭ್ರಮಿಸಿದರು.
ಈ ವೇಳೆ ಸಾಂಕೇತಿಕವಾಗಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ನಟೇಶ ಮಾತನಾಡಿ, ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಗಣೇಶ ಮೂರ್ತಿಗಳನ್ನು ತಯಾರಿಸುವುದು ಪರಿಸರಕ್ಕೆ ಹಾನಿಕಾರಕ. ಈಚೆಗೆ ಮುಂಬಯಿನಲ್ಲಿ ಸಂಭವಿಸಿದ ಪ್ರವಾಹದಲ್ಲಿ ಸಮುದ್ರದಿಂದ ತ್ಯಾಜ್ಯವೆಲ್ಲ ದಂಡೆಗೆ ಬಂದು ಬಿದ್ದಿದೆ. ಅಂದರೆ ನಾವು ಪರಿಸರಕ್ಕೇ ಏನೇ ತ್ಯಾಜ್ಯ ನೀಡಿದರೂ ಅದು ಮರಳಿ ನಮಗೇ ನೀಡುತ್ತದೆ. ಹೀಗಾಗಿ ಪರಿಸರ ಹಾನಿ ತಡೆಗಟ್ಟುವ ಮಹತ್ತರ ಹೊಣೆ ನಮ್ಮ ಮೇಲಿದೆ ಎಂದರು.
ಪಿಒಪಿ ಗಣೇಶಗಳಿಂದ ಪರಿಸರಕ್ಕೆ ಹಾನಿ ಎಂಬುದನ್ನು ಅರಿತು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ಆದರೂ ಇಂದಿಗೂ ಅದು ಎಲ್ಲೆಡೆ ಜಾರಿಯಾಗುತ್ತಿದೆ. ಇನ್ನು ಮುಂದಾದರೂ ನಾವು ಪರಿಸರ ಸ್ನೇಹಿಯಾದ ಗಣೇಶ ಮೂರ್ತಿಗಳ ತಯಾರಿಕೆಗೆ ಒತ್ತು ನೀಡಬೇಕು. ಈ ವಿಚಾರದಲ್ಲಿ ಇಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ಸ್ವಾಗತಾರ್ಹ ಎಂದರು.
ತರಬೇತುದಾರ ಸೂಗಣ್ಣ ಮೂರ್ತಿಗಳ ತಯಾರಿಕೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ, ಇದು ವಿಶೇಷವಾದ ಮಣ್ಣಾಗಿದೆ. ಇದರಿಂದ ಗಣೇಶ, ಗೌರಿ, ಎತ್ತುಗಳನ್ನು ಮಾಡಿ ಪೂಜೆ ಮಾಡುತ್ತಾರೆ ಎಂದು ವಿವರಿಸಿದರು.
ಗ್ರೀನ್ ರಾಯಚೂರು ಉಪಾಧ್ಯಕ್ಷ ಸಿ.ವಿ.ಪಾಟೀಲ, ಡಾ| ಅಮರಖೇಡ, ಕೋಟೇಶ್ವರಾವ್, ಉದಯಕಿರಣ, ಸಂಗಮೇಶ ಪಾಟೀಲ, ಸರಸ್ವತಿ ಕಿಲಕಿಲೆ ಸೇರಿ ಇತರರಿದ್ದರು.
ಕಳೆದ ಎರಡು ವರ್ಷಗಳಿಂದ ಈ ಕಾರ್ಯಾಗಾರ ನಡೆಸಲಾಗುತ್ತಿದೆ. ಈಗಾಗಲೇ ಸಾಕಷ್ಟು ಹಾನಿಯಾಗಿದ್ದು, ಇನ್ನೂ ವಿಳಂಬ ಮಾಡಿದರೆ ಪರಿಸರ ಸಂಪೂರ್ಣ ನಾಶವಾಗಲಿದೆ. ನಮ್ಮ ಸಂಸ್ಥೆ ವಿವಿಧ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದ್ದು, ಸಾರ್ವಜನಿಕರ ಸಹಕಾರ ಕೂಡ ಅಗತ್ಯ.
•
ಕೊಂಡಾ ಕೃಷ್ಣಮೂರ್ತಿ,
ಗ್ರೀನ್ ರಾಯಚೂರು ಸಂಸ್ಥೆ ಅಧ್ಯಕ್ಷ