ರಾಯಚೂರು: ಯಾವುದೇ ಆಪತ್ತು ಎದುರಾದಾಗ ತಕ್ಷಣಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಜಿಪಿಎಸ್ ಆಧಾರಿತ ಎಮೆರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಮ್ ಸೇವೆಗೆ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸಿ.ಬಿ.ವೇದಮೂರ್ತಿ ಬುಧವಾರ ಚಾಲನೆ ನೀಡಿದರು.
ರಾಜ್ಯ ಸರ್ಕಾರದಿಂದ ಈಚೆಗೆ ಈ ಸೌಲಭ್ಯಕ್ಕೆ ಚಾಲನೆ ಸಿಕ್ಕಿದ್ದು, ಜಿಲ್ಲೆಯಲ್ಲೂ ಜಿಪಿಎಸ್ ಅಳವಡಿಸಿದ ನಾಲ್ಕು ವಾಹನಗಳನ್ನು ಲೋಕಾರ್ಪಣೆ ಮಾಡಲಾಯಿತು. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಪಿ ಡಾ| ಸಿ.ಬಿ. ವೇದಮೂರ್ತಿ, ಸಾರ್ವಜನಿಕರಿಗೆ ಎದುರಾಗುವ ಯಾವುದೇ ಆಪತ್ತುಗಳಿಗೆ ತುರ್ತು ಸೇವೆ ಒದಗಿಸುವ ಉದ್ದೇಶದಿಂದ ಸರ್ಕಾರ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ತುರ್ತು ಸ್ಪಂದನಾ ವಾಹನಗಳನ್ನು ಸೇವೆಗೆ ಬಿಡುಗಡೆ ಮಾಡಿದೆ. ಈ ಮುಂಚೆ 100 ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸುತ್ತಿದ್ದಂತೆ, ಈಗ 112 ಸಂಖ್ಯೆಗೆ ಕರೆ ಮಾಡಿ ಸಮಸ್ಯೆ ತಿಳಿಸಿದರೆ, ತ್ವರಿತ ಸೇವೆ ನೀಡಲು ನೆರವಾಗಲಿದೆ ಎಂದು ತಿಳಿಸಿದರು.
ಇಆರ್‌ಎಸ್‌ಎಸ್ ಯೋಜನೆಯಡಿ ಜಿಲ್ಲೆಗೆ ನಾಲ್ಕು ವಾಹನ ನೀಡಿದ್ದು, ರಾಯಚೂರಿಗೆ 2, ಸಿಂಧನೂರು ಮತ್ತು ಲಿಂಗಸುಗೂರು ಠಾಣೆಗೆ ತಲಾ ಒಂದು ವಾಹನ ನೀಡಲಾಗಿದೆ. ಈಗಾಗಲೇ ತುರ್ತು ಸೇವೆ ಒದಗಿಸಲು 100, 101, 102, ಮತ್ತು 108 ಸಹಾಯವಾಣಿ ಸಂಖ್ಯೆಗಳಿವೆ. ಈ ಎಲ್ಲ ತುರ್ತು ಸೇವೆ ಪಡೆಯಲು 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು. ಕರೆ ನೇರವಾಗಿ ಬೆಂಗಳೂರಿನಲ್ಲಿರುವ ಕಂಟ್ರೋಲ್ ರೂಮ್‌ಗೆ ತೆರಳಲಿದ್ದು, ಅಲ್ಲಿಂದ ಸಂಬಂಧಿ ಸಿದ ವಾಹನಗಳಿಗೆ ಸಂದೇಶ ರವಾನೆಯಾಗುತ್ತದೆ. ಮೊಬೈಲ್ ಸಂಖ್ಯೆ ಮೂಲಕ ಘಟನೆ ನಡೆದ ಸ್ಥಳಕ್ಕೆ ತ್ವರಿತಗತಿಯಲ್ಲಿ ತೆರಳಲು ಅನುಕೂಲವಾಗಲಿದೆ ಎಂದರು.
ಸಿಂಧನೂರು, ಲಿಂಗಸೂಗುರು ಉಪ ವಿಭಾಗದ ಡಿವೈಎಸ್‌ಪಿ ಉಸ್ತುವಾರಿಯಲ್ಲಿ ಒಂದೊಂದು ವಾಹನಗಳು ಕಾರ್ಯ ನಿರ್ವವಹಿಸಲಿವೆ. ನಾಲ್ಕು ವಾಹನಗಳಿಗೂ ಎಎಸ್‌ಐ ದರ್ಜೆಯ ಅಧಿ ಕಾರಿ ಮತ್ತು ಒಬ್ಬ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಚಾಲಕರನ್ನು ನೀಡಲಾಗಿದೆ. ಇದು ನಿರಂತರ ಸೇವೆಯಯಾಗಿರಲಿದ್ದು, ಯಾವ ಹೊತ್ತಿನಲ್ಲಿ ದೂರು ಬಂದರೂ ಸ್ಪಂದಿಸಲಿದೆ ಎಂದು ತಿಳಿಸಿದರು.
ಇದಕ್ಕಾಗಿ ಅಪ್ಲಿಕೇಶನ್ ಕೂಡ ಸಿದ್ಧಪಡಿಸಿದ್ದು, ಅದರಲ್ಲಿ ವಿಳಾಸ ಮಾಹಿತಿ ನೀಡಬಹುದು. ವಾಹನದಲ್ಲಿ ಎಂ.ಡಿ.ಟಿ. ಡಾಟಾ ಟರ್ಮಿನಲ್ ತಂತ್ರಾಂಶ ಅಳವಡಿಸಲಾಗಿದೆ. ಇದರ ಸಹಾಯದಿಂದ ಅವಘಡ ಸ್ಥಳಕ್ಕೆ ಆಗಮಿಸಲಿದೆ ಎಂದರು.
ಸಾರ್ವಜನಿಕರು ಯಾವುದೇ ಮಾಹಿತಿ ನೀಡಬಹುದು. ಇನ್ನು ದೇವದುರ್ಗಕ್ಕೆ ಶೀಘ್ರದಲ್ಲೇ ವಾಹನ ಜಾರಿಗೊಳಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.