ರಾಯಚೂರು: ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪ್ರಜಾಪ್ರಭುತ್ವ ಹಾದಿ ತಪ್ಪುತ್ತಿದೆ. ಫ್ಯಾಸಿಸ್ಟ್ ಧೋರಣೆ ಬಿಟ್ಟು ಪೊಲೀಸರು ಬಂಧಿಸಿರುವ ಹೋರಾಟಗಾರ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ವಿವಿಧ ಜನಪರ ಸಂಘಟನೆಗಳ ಒಕ್ಕೂಟ ಶುಕ್ರವಾರ ಪ್ರತಿಭಟನೆ ನಡೆಸಿತು.
ನಗರದ ಡಾ| ಅಂಬೇಡ್ಕರ್ ವೃತ್ತದಲ್ಲಿ ಧರಣಿ ನಡೆಸಿದ ಸಂಘಟನೆಗಳ ಸದಸ್ಯರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಶ್ನೆ ಮಾಡಿದರೆ ಮಹಾಪರಾಧ ಎನ್ನುವಂತಾಗಿದೆ. ಬಿಜೆಪಿ ಸರ್ಕಾರಗಳು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಕೈಗೊಂಬೆ ರೀತಿ ಮಾಡಿಕೊಂಡಿವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡುತ್ತಿವೆ. ಕೋಮು ಪ್ರಚೋದನೆ ಖಂಡಿಸುವ, ಸರ್ಕಾರವನ್ನು ಪ್ರಶ್ನಿಸುವವರನ್ನು ಬಂಧಿಸುವ ಮೂಲಕ ಅವರ ಧ್ವನಿ ಅಡಗಿಸುವ ಹುನ್ನಾರ ನಡೆಸಲಾಗಿದೆ ಎಂದು ದೂರಿದರು.
ಕಳೆದ ಅ.24ರಂದು ಗೌರಿ ಲಂಕೇಶ ಟ್ರಸ್ಟ್‌ನ ಕಾರ್ಯದರ್ಶಿ, ಸ್ವರಾಜ್ಯ ಇಂಡಿಯಾದ ರಾಜ್ಯ ಕಾರ್ಯದರ್ಶಿ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರನ್ನು ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ.
25 ವರ್ಷಗಳ ಹಿಂದೆ ರಾಯಚೂರಿನಲ್ಲಿ ವಿನೋದ ಎಂಬುವವರ ವಿರುದ್ಧ ದಾಖಲಾದ ನಾಲ್ಕು ಪ್ರಕರಣಗಳ ಆರೋಪಿ ಇವರೇ ಎಂದು ಬಂಧಿಸಲಾಗಿದೆ. ಆದರೆ, ಆ ವಿನೋದಗೂ ನರಸಿಂಹಮೂರ್ತಿಗೂ ಯಾವುದೇ ಸಂಬಂಧವಿಲ್ಲದಿದ್ದರೂ ಬಿಡುಗಡೆ ಮಾಡುತ್ತಿಲ್ಲ ಎಂದು ದೂರಿದರು.
ನರಸಿಂಹಮೂರ್ತಿ ಇಷ್ಟು ದಿನ ತಲೆ ಮರೆಸಿಕೊಂಡಿದ್ದ ಎಂದು ಪೊಲೀಸರು ಕಟ್ಟುಕತೆ ಹೇಳುತ್ತಿದ್ದಾರೆ. ಆದರೆ, ಜನಪರ ಚಳವಳಿಯಲ್ಲಿ ನಿರಂತರವಾಗಿ ತೊಡಗಿ ಹೋರಾಟ, ಬರಹಗಳ ಮೂಲಕ ನರಸಿಂಹಮೂರ್ತಿ ನಮ್ಮ ಮಧ್ಯೆಯೇ ಇದ್ದರು. ಎಂದಿಗೂ ಅವರು ತಲೆ ಮರೆಸಿಕೊಂಡಿರಲಿಲ್ಲ. ಆದರೆ, ರಾಜ್ಯ ಸರ್ಕಾರ ಷಡ್ಯಂತ್ರ ಮಾಡಿ ಅವರನ್ನು ಬಂಧಿಸಿದೆ ಎಂದು ಆರೋಪಿಸಿದರು.
ಈ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು. ನಿರಾಧಾರ ಆರೋಪಗಳಿಂದ ಅವರನ್ನು ಹಿಂಸಿಸುವುದು ಸರಿಯಲ್ಲ. ಇಲ್ಲವಾದಲ್ಲಿ ಮುಂದೆ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ವಿವಿಧ ಸಂಘಟನೆಗಳ ಮುಖಂಡರಾದ ಆರ್.ಮಾನಸಯ್ಯ, ಚಾಮರಸ ಮಾಲಿಪಾಟೀಲ, ಎನ್. ಲಕ್ಷ್ಮಣಗೌಡ ಕಡಗಂದೊಡ್ಡಿ, ಹನುಮಂತಪ್ಪ ಕಾಕರಗಲ್, ಕುಮಾರ ಸಮತಳ, ಕೆ. ನಾಗಲಿಂಗಸ್ವಾಮಿ, ಲಾಲಪ್ಪ ಪಾಲ್ಗೊಂಡಿದ್ದರು.