ರಾಯಚೂರು: ಭೂ ಒಡೆತನ ಯೋಜನೆಯಡಿ ಕಡತಗಳ ವಿಲೇವಾರಿಗೆ ಅನಗತ್ಯ ವಿಳಂಬ ಮಾಡುತ್ತಿರುವ ಡಾ| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ಪ್ರಭಾರ ವ್ಯವಸ್ಥಾಪಕ ಸುಬ್ರಮಣ್ಯಂ ಹಾಗೂ ಹೊರಗುತ್ತಿಗೆ ಅಧಿಕಾರಿಗಳನ್ನು ಅಮಾನತು ಮಾಡಲು ಆಗ್ರಹಿಸಿ ದಲಿತ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ನಿಗಮದ ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.
ಈ ಕುರಿತು ಜಿಲ್ಲಾಧಿಕಾರಿ ಮೂಲಕ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಿದ ಧರಣಿ ನಿರತರು, ಭೂ ಒಡೆತನ ಯೋಜನೆ ಎರಡು ದಶಕಗಳ ಹಿಂದೆಯೇ ಜಾರಿಗೊಂಡಿದೆ. ಅದಕ್ಕೆ ಜಿಲ್ಲಾಧಿಕಾರಿಯೇ ಅಧ್ಯಕ್ಷ್ಯರಾಗಿದ್ದು, ಎಲ್ಲ ಜಮೀನುಗಳ ದರ ನಿಗದಿ ಮಾಡುತ್ತಾರೆ. ಅದಕ್ಕೆ ಬೇಕಾದ ದಾಖಲೆಗಳನ್ನು ನಿಗಮದ ವ್ಯವಸ್ಥಾಪಕ ಪರಿಶೀಲಿಸಿ ಸಲ್ಲಿಸಬೇಕು. ಆದರೆ, ಜಿಲ್ಲಾಧಿಕಾರಿ ಇದ್ಯಾವುದನ್ನು ಮಾಡದೇ ಬಂದ ಕಡತಗಳನ್ನು ಮೂಲೆಗುಂಪು ಮಾಡುತ್ತಿದ್ದು, ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.
ತಾಲೂಕಿನ ರಾಂಪುರ ಸೀಮಾಂತರದ ಶ್ರೀರಾಮನಗರ ಕ್ಯಾಂಪ್, ಕಸ್ಬೆ ಕ್ಯಾಂಪ್, ಕುಕ್ಕಲ ಕ್ಯಾಂಪ್ ಹಾಗೂ ಮಮದಾಪೂರ ಗ್ರಾಮದ ಜನರು ನಿಗಮಕ್ಕೆ ಕಳೆದ ನಾಲ್ಕು ವರ್ಷದಿಂದ ಅರ್ಜಿ ಸಲ್ಲಿಸಿದರೂ ಅವರಿಗೆ ಭೂಮಿ ಒದಗಿಸಿಲ್ಲ. ಕನಿಷ್ಠಪಕ್ಷ ಅವರ ಅರ್ಜಿಗಳನ್ನು ಕೂಡ ವಿಲೇವಾರಿ ಮಾಡಿಲ್ಲ ಎಂದು ದೂರಿದರು. ಇದೊಂದು ದೊಡ್ಡ ಮಟ್ಟದ ಅವ್ಯವಹಾರವಾಗಿದ್ದು, ಅದರಲ್ಲಿ ಭಾಗಿಯಾದ ಅಧಿಕಾರಿಗಳನ್ನು ನಿರ್ದಾಕ್ಷಿಣ್ಯವಾಗಿ ಅಮಾನತು ಮಾಡಬೇಕು. ಮಂಜೂರಾದ ಫಲಾನುಭವಿಗಳಿಗೆ ಭೂಮಿ ಒದಗಿಸಬೇಕು. ಅಲೆಮಾರಿ ಅಭಿವೃದ್ಧಿ ನಿಗಮದಿಂದ ಫಲಾನುಭವಿಗಳಿಗೆ ಹಣ ಬಿಡುಗಡೆಯಾದರೂ ವಿತರಿಸಿಲ್ಲ ಎಂದು ದೂರಿದರು.
ಜಿಲ್ಲಾಡಳಿತದ ಬಳಿ 2018-19ನೇ ಸಾಲಿನ 1,501 ಮತ್ತು 2019-20ನೇ ಸಾಲಿನ 200 ಅರ್ಜಿದಾರರಿಗೆ ಭೂಮಿ ಖರೀದಿಸಲು ಅನುದಾನ ಇದ್ದರೂ ಫಲಾನುಭವಿಗಳಿಗೆ ಅದು ಉಪಯೋಗಕ್ಕೆ ಬರುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಅವರು ಬೇಕಾಬಿಟ್ಟಿ ಉತ್ತರ ನೀಡುತ್ತಿದ್ದಾರೆ ಎಂದು ದೂರಿದರು.
ಈ ಕೂಡಲೇ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಭೂಮಿ ಖರೀದಿಸಿ ನೀಡಬೇಕು ಎಂದು ಒತ್ತಾಯಿಸಿದರು. ಮುಖಂಡ ತಿಮ್ಮಪ್ಪ, ಭಗವಂತ ಏಗನೂರು, ಪರಶುರಾಮ, ಈರಣ್ಣ ಭಂಡಾರಿ, ರವಿ ನಾಯಕ, ಚಂದ್ರು ನಾಯಕ, ಶಿವಪ್ಪ ನಾಯಕ, ಸುರೇಶ ನಾಯಕ, ಜಂಗ್ಲೆಪ್ಪ ಸೇರಿ ಅನೇಕರು ಪಾಲ್ಗೊಂಡಿದ್ದರು.