Advertisement

ವಾಸ್ತು ಪ್ರಕಾರವೇ ಮನೆ ಕಟ್ಟಿ ಕೊಡಿ!

12:08 PM Nov 23, 2019 | Naveen |

ರಾಯಚೂರು: ಈ ಹಿಂದೆ ನೆರೆ ಸಂತ್ರಸ್ತರಿಗೆ ಕಟ್ಟಿದ ಮನೆಗಳಿಗೆ ವಾಸ್ತುನೇ ಸರಿಯಾಗಿಲ್ಲ. ಈ ಬಾರಿ ವಾಸ್ತು ಪ್ರಕಾರವೇ ಮನೆ ಕಟ್ಟಿಕೊಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಗುರ್ಜಾಪುರ ಗ್ರಾಮದ ನೆರೆ ಸಂತ್ರಸ್ತರು.

Advertisement

ಈಚೆಗೆ ಕೃಷ್ಣಾ ನದಿಗೆ ಹೆಚ್ಚುವರಿ ನೀರು ಹರಿಸಿದ ಪರಿಣಾಮ ಬಂದ ನೆರೆಯಿಂದ ಮುಳುಗಡೆಯಾದ ತಾಲೂಕಿನ ಗುರ್ಜಾಪುರ ಸ್ಥಳಾಂತರಿಸುವ ಸಂಬಂಧ ಶುಕ್ರವಾರ ಜಿಲ್ಲಾಧಿಕಾರಿ ಆರ್‌.ವೆಂಕಟೇಶ ಕುಮಾರ್‌ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಭೆ ನಡೆಸಿದರು.

ಈ ವೇಳೆ ಹಿಂದೆ ನಿರ್ಮಿಸಿದ ಮನೆಗಳಿಗೆ ಯಾಕೆ ಹೋಗಿಲ್ಲ ಎಂದು ಕೇಳಿದರೆ ಅಲ್ಲಿನ ಸೌಲಭ್ಯಕ್ಕಿಂತ ವಾಸ್ತು ಬಗ್ಗೆಯೇ ಹೆಚ್ಚು ದೂರುಗಳು ಬಂದವು. ಈ ವೇಳೆ ಮಾತನಾಡಿದ ಡಿಸಿ, ನೆರೆಪೀಡಿತ ಗುರ್ಜಾಪುರ ಸ್ಥಳಾಂತರಿಸಲು ಸರ್ಕಾರ ಬದ್ಧವಾಗಿದ್ದು, ಅದಕ್ಕೆ ಎಲ್ಲರ ಒಮ್ಮತದ ಅಭಿಪ್ರಾಯ ಬೇಕು. ನವಗ್ರಾಮದಲ್ಲಿ ಯಾವುದೇ ಕುಂದುಂಟಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.

ಈಚೆಗೆ ನೀರು ಹೆಚ್ಚು ಬಂದ ಕಾರಣ ಇಡೀ ಗ್ರಾಮವನ್ನೇ ಖಾಲಿ ಮಾಡುವ ಪ್ರಸಂಗ ಬಂದಿತ್ತು. ಹೀಗಾಗಿ ಸರ್ಕಾರ ಸೂಕ್ತ ಸುಸಜ್ಜಿತ ಸ್ಥಳದಲ್ಲಿ ಗ್ರಾಮ ನಿರ್ಮಿಸಿ ಸ್ಥಳಾಂತರಿಸಲು ಮುಂದಾಗಿದ್ದು, ಅದಕ್ಕೆ ನಿಮ್ಮಿಂದ ಯಾವುದೇ ಆಕ್ಷೇಪ ಇರಕೂಡದು. ನಿಮ್ಮ ಏನೇ ಬೇಡಿಕೆಗಳಿದ್ದರೂ ಈಗಲೇ ಸ್ಪಷ್ಟಪಡಿಸುವಂತೆ ಸೂಚಿಸಿದರು.

ಹೊಸ ಮನೆ ನಿರ್ಮಿಸಿದ ಬಳಿಕ ನಿಗದಿತ ಕಾಲಮಿತಿಯೊಳಗೆ ಎಲ್ಲರೂ ಸೇರಿಕೊಳ್ಳಬೇಕು. ಇಡೀ ಗ್ರಾಮವೇ ಸ್ಥಳಾಂತರ ಆಗಬೇಕು. ಸೂಕ್ತ ಸ್ಥಳ ಪರಿಶೀಲಿಸಿ ನಿಮ್ಮೊಂದಿಗೆ ಚರ್ಚಿಸಿಯೇ ಅಂತಿಮಗೊಳಿಸಲಾಗುವುದು. ಆದರೆ, ಏನೇ ಅಭಿಪ್ರಾಯಗಳಿದ್ದರೂ ಎಲ್ಲರೂ ಒಟ್ಟಾಗಿ ತಿಳಿಸಬೇಕು. ನವಗ್ರಾಮದಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್‌ ಸೇರಿ ಎಲ್ಲ ಸೌಲಭ್ಯ ಕಲ್ಪಿಸುವುದಾಗಿ ತಿಳಿಸಿದರು.

Advertisement

ಈ ಹಿಂದೆ ಕಟ್ಟಿದ ಮನೆಗಳು ತುಂಬಾ ಚಿಕ್ಕದಾಗಿದ್ದು, ಇರಲು ಯೋಗ್ಯವಾಗಿಲ್ಲ ಎಂದು ಕೆಲವರು ದೂರಿದರು. 2009ರಲ್ಲಿ ಪ್ರವಾಹ ವೇಳೆ ಸಂತ್ರಸ್ತರಿಗಾಗಿ ನಿರ್ಮಿಸಿದ ಮನೆಗಳ ಸ್ಥಿತಿಗತಿ ಕುರಿತು ಸಮಿತಿ ರಚಿಸಿ ವರದಿ ನೀಡುವಂತೆ ಸಹಾಯಕ ಆಯುಕ್ತ ಸಂತೋಷರಿಗೆ ಡಿಸಿ ಸೂಚಿಸಿದರು.

ಹಿಂದೆ ಆದಂತ ಅಚಾತುರ್ಯ ನಡೆಯದಂತೆ ಈ ಬಾರಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು. ಗ್ರಾಮ ಸ್ಥಳಾಂತರಿಸುವ ಕುರಿತು ಗ್ರಾಮ ಸಭೆ ನಡೆಸಿ ಗ್ರಾಮಸ್ಥರ ಒಪ್ಪಿಗೆ ಪತ್ರ ಪಡೆಯಲಾಗುವುದು. ನೀವೆಲ್ಲ ಒಪ್ಪಿದ ಮೇಲೆ ಮನೆಗಳ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು. ಆದರೆ, ನಿಮ್ಮ ಬೇಡಿಕೆಗಳ ಕುರಿತು ಚರ್ಚಿಸಿ ಒಮ್ಮತ ತೀರ್ಮಾನಕ್ಕೆ ಬರುವಂತೆ ಡಿಸಿ ಸೂಚಿಸಿದರು.

ಗುರ್ಜಾಪುರದಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವ ಘಟಕವು ಹಲವು ದಿನಗಳಿಂದ ಕೆಟ್ಟಿದೆ. ಬೋರ್‌ ಕೋರೆದರೆ ಉಪ್ಪು ನೀರು ಬರುತ್ತಿದ್ದು, ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ ಎಂದು ಗ್ರಾಮಸ್ಥರು ದೂರಿದರು. ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಹಣೆ ಕೈಗೊಳ್ಳುವಂತೆ ಜಿಪಂ ಅಧಿಕಾರಿಗೆ ಜಿಲ್ಲಾಧಿಕಾರಿ ದೂರವಾಣಿ ಮೂಲಕ ಸೂಚಿಸಿದರು. ಬಳಿಕ 2009ರಲ್ಲಿ ಸಂತ್ರಸ್ತರಿಗಾಗಿ ನಿರ್ಮಿಸಿದ ಮನೆಗಳನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು. ತಹಶೀಲ್ದಾರ್‌ ಡಾ| ಹಂಪಣ್ಣ, ಜಿಪಂ ಸದಸ್ಯೆ ಹೇಮಾವತಿ ಸತೀಶ, ತಾಪಂ ಸದಸ್ಯ ತಮ್ಮುಡು, ಪಿಡಿಒ ಚನ್ನಮ್ಮ ವಿವಿಧ ಇಲಾಖೆ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next