ರಾಯಚೂರು: ದಸರಾ ಹಬ್ಬದ ಅಂಗವಾಗಿ ಜಿಲ್ಲೆಯಲ್ಲಿ ನವಶಕ್ತಿ ವೈಭವ ಎಂದಿಗಿಂತ ಕಳೆಗಟ್ಟಿದ್ದು, ದೇವಿ ಆರಾಧನೆಗೆ ರವಿವಾರ ವಿಧ್ಯುಕ್ತ ಚಾಲನೆ ಸಿಕ್ಕಿದೆ. ವಿವಿಧ ದೇವಸ್ಥಾನಗಳು, ಮಠಗಳು ಹಾಗೂ ವಿವಿಧ ಸಮಾಜಗಳಿಂದ ದೇವಿ ಆರಾಧನೆಗೆ ವಿಜೃಂಭಣೆಯ ಚಾಲನೆ ನೀಡಲಾಯಿತು.
ನಗರದ ಶ್ರೀ ವೀರಶೈವ ಗೌಳಿ ಸಮಾಜದಿಂದ 37ನೇ ವರ್ಷದ ಘಟಸ್ಥಾಪನಾ ನವರಾತ್ರಿ ಮಹೋತ್ಸವ ಜರುಗಿತು. ನಗರದ ಕಿಲ್ಲೇ ಬೃಹನ್ಮಠದಲ್ಲಿ ದೇವಿ ಮೂರ್ತಿ ಮೆರವಣಿಗೆಗೆ ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.
ಬಳಿಕ ಅಲ್ಲಿಂದ ನಗರದ ಪ್ರಮುಖ ರಸ್ತೆಗಳಲ್ಲಿ ದೇವಿ ಮೂರ್ತಿ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ನಗರ ಶಾಸಕ ಡಾ| ಶಿವರಾಜ ಪಾಟೀಲ ಸೇರಿದಂತೆ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
ಕಿಲ್ಲೆ ಬೃಹನ್ಮಠದಲ್ಲೂ ನವರಾತ್ರಿ ನಿಮಿತ್ತ ಶ್ರೀಗಳು ಘಟಸ್ಥಾಪನೆ ಮಾಡಿ ರಜತ ಮೂರ್ತಿಗೆ ವಿಶೇಷ ಅಲಂಕಾರ, ಪೂಜೆ ಸಲ್ಲಿಸಿದರು. ಪುರಾಣ ಪ್ರವಚನ ಕೂಡ ಹಮ್ಮಿಕೊಳ್ಳಲಾಗಿದೆ. ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಪೀಠಾಧಿ ಪತಿ ಶ್ರೀ ಸುಬುಧೇಂದ್ರ ತೀರ್ಥರು ಘಟಸ್ಥಾಪನೆ ನೆರವೇರಿಸುವ ಮೂಲಕ ಪೂಜೆಗೆ ಚಾಲನೆ ನೀಡಿದರು.
ರಾಯಚೂರು ನಗರದ ಗದ್ವಾಲ್ ರಸ್ತೆಯಲ್ಲಿರುವ ಶ್ರೀ ಮಾತಾ ಕಾಳಿಕಾದೇವಿ, ಶ್ರೀ ಮಾತಾ ಲಕ್ಷ್ಮಮ್ಮದೇವಿ ದೇವಸ್ಥಾನದಲ್ಲಿ ಮುನ್ನೂರು ಕಾಪು (ಬಲಿಜ) ಸಮಾಜದಿಂದ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಕಾಳಿಕಾದೇವಿ ಹಾಗೂ ಲಕ್ಷ್ಮಮ್ಮದೇವಿಗೆ ವಿಶೇಷ ಪೂಜೆ, ಹೋಮ ನೆರವೇರಿಸಲಾಯಿತು. ಈ ಬಾರಿ ದೇವಸ್ಥಾನ ಆವರಣದಲ್ಲಿ ನಿರ್ಮಿಸಿರುವ 18 ಅಡಿ ಎತ್ತರದ ಮಹಿಷಾಸುರ ಮರ್ದಿನಿ ಮೂರ್ತಿ ಅನಾವರಣ ಮಾಡಲಾಯಿತು.
ಸರಾಫ್ ಬಜಾರನ ತಾಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಆಚರಣೆಗೆ ಚಾಲನೆ ಸಿಕ್ಕಿತು. ಮಹಿಳೆಯರು ದೇವಿ ಸಹಸ್ರ ನಾಮಾವಳಿ ಪಾರಾಯಣ ಮಾಡಿ ಸೇವೆಗೈದರು. ಸಮೀಪದ ಯರಮರಸ್‌ನ ರಾಮಕ್ಕಮ್ಮವ್ವ ದೇವಸ್ಥಾನದ ಬಳಿ ಸುಮಾರು 10 ಅಡಿ ದೇವಿ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಉಪ್ಪಾರವಾಡಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ 48ನೇ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ದೇವಿಗೆ ಬೆಳಗಿನ ಜಾವ ಸುಭ್ರಭಾತ, ಅಭಿಷೇಕ ನೆರವೇರಿಸಲಾಯಿತು. ಸಂಜೆ ಸೂರ್ಯ ವಾಹನೋತ್ಸವ ಸೇವೆ ವಿಜೃಂಭಣೆಯಿಂದ ಜರುಗಿತು. ಕಲ್ಲೂರಿನ ಶ್ರೀ ಲಕ್ಷ್ಮೀ ದೇವಿ ದೇವಸ್ಥಾನದಲ್ಲೂ ದಸರಾ ಆಚರಣೆಗೆ ಚಾಲನೆ ನೀಡಲಾಯಿತು. ದೇವಿಗೆ ವಿಶೇಷ ಅಲಂಕಾರ ಸೇವೆ, ಪೂಜೆ ನೆರವೇರಿಸಲಾಯಿತು.