ರಾಯಚೂರು: ಭಾರತ ಜೈನ ಸಂಘಟನೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ತಾಲೂಕಿನ 22 ಕೆರೆ ಕುಂಟೆಗಳ ಭರ್ತಿಗೆ ಈಗಾಗಲೇ ಚಾಲನೆ ನೀಡಿದ್ದು, ಇದರಿಂದ ನಾಲ್ಕು ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬಹುದು ಎಂದು ಶಾಸಕ ಬಸನಗೌಡ ದದ್ದಲ್ ತಿಳಿಸಿದರು.
ತಾಲೂಕಿನ ದೇವಸೂಗುರು ಹೋಬಳಿಯ ಸಗಮಕುಂಟ ಗ್ರಾಮದಲ್ಲಿ ಕೃಷಿ ಇಲಾಖೆಯ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರೈತರಿಗೆ ಕೃಷಿಗಾಗಿ ನೀರಿನ ಅಗತ್ಯತೆ ಹೆಚ್ಚಾಗಿದ್ದು, ಆ ನಿಟ್ಟಿನಲ್ಲಿ ಹೆಚ್ಚು ಒತ್ತು ನೀಡಲಾಗುತ್ತಿದೆ. ರೈತ ಸಮುದಾಯ ಸದೃಢವಾದಾಗ ಮಾತ್ರ ವ್ಯಾಪಾರ ವಹಿವಾಟು ನಡೆಯುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೃಷಿ ಇಲಾಖೆಯ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕು. ರೈತರಿಗೆ ಇಲಾಖೆಯ ಸಹಾಯಧನ ಹೆಚ್ಚಾಗಬೇಕು ಹಾಗೂ ಗುಣಮಟ್ಟದ ಉಪಕರಣಗಳು ಸಿಗಬೇಕು ಎಂದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ| ಸಂದೀಪ ಮಾತನಾಡಿ, ಕಳೆದ ಎರಡ್ಮೂರು ವರ್ಷದಿಂದ ತಾಲೂಕಿನಲ್ಲಿ ಬರ ವ್ಯಾಪಿಸಿದ್ದು ಈ ವರ್ಷ ಮಳೆ ಚನ್ನಾಗಿ ಬಂದಿದ್ದು, ಬೆಳೆಗಳು ಉತ್ತಮವಾಗಿವೆ. ರೈತರು ಕಾಲಕಾಲಕ್ಕೆ ಇಲಾಖೆ ಮಾಹಿತಿಯನ್ನು ಪಡೆಯಬೇಕು ಎಂದರು.
ಕಳೆದ ವರ್ಷ ಬಹಳಷ್ಟು ರೈತರು ಫಸಲ್ ಬಿಮಾ ಯೋಜನೆ ಲಾಭ ಪಡೆದಿದ್ದು, ಈ ವರ್ಷದ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ನೋಂದಣಿ ಮಾಡಿಸಿಕೊಳ್ಳುವಂತೆ ತಿಳಿಸಿದರು. ಇದೇ ವೇಳೆ ಕೃಷಿ ಇಲಾಖೆ ಸಿದ್ಧಪಡಿಸಿದ ವಿವಿಧ ತಾಂತ್ರಿಕ ಮಾಹಿತಿಯ ಕರ ಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಕೃಷಿಗೆ ಸಂಬಂಧಿಸಿದ ಪರಿಕರಗಳು, ಯಂತ್ರೋಪಕರಣ, ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಶ್ರೀವಾಣಿ ಜಿ.ಎನ್., ಹತ್ತಿ, ತೊಗರಿ ಹಾಗೂ ಕಡಲೆಯಲ್ಲಿ ಬರುವ ಕೀಟ ನಿರ್ವಹಣಾ ಕಾರ್ಯಕ್ರಮ ಕುರಿತು ರೈತರೊಂದಿಗೆ ಸಂವಾದ ನಡೆಸಿದರು. ತಾಪಂ ಸದಸ್ಯರು, ಗ್ರಾಪಂ ಅಧ್ಯಕ್ಷೆ ಹಾಗೂ ಚುನಾಯಿತ ಪ್ರತಿನಿಧಿಗಳು ರೈತ ಮುಖಂಡರು ಪಾಲ್ಗೊಂಡಿದ್ದರು. ಗೃಹ ವಿಜ್ಞಾನಿ ಅನುಪಮಾ, ದೇವಸುಗೂರು ಹೋಬಳಿ ಅಧಿಕಾರಿಗಳಾದ ಮಾನಸ, ನಾಗರಾಜ, ಸುರೇಶ ಸೇರಿ ಇತರರಿದ್ದರು.