ರಾಯಚೂರು: ಕೊರೊನಾ 2ನೇ ಅಲೆ ಕಾರಣಕ್ಕೆ ಲಾಕ್‌ಡೌನ್ ಜಾರಿಗೊಳಿಸಿದ ಪರಿಣಾಮ ಕೆಲ ದಿನಗಳಿಂದ ಜಿಲ್ಲಾದ್ಯಂತ ಹೇರಿದ್ದ ಲಾಕ್ ಡೌನ್ ತೆರವುಗೊಳಿಸಿದ್ದು, ಸೋಮವಾರದಿಂದ ವ್ಯಾಪಾರ ವಹಿವಾಟಿಗೆ ಮುಕ್ತಗೊಳಿಸಲಾಗಿದೆ. ಸಂಜೆ 7ಗಂಟೆ ನಂತರ ಮತ್ತೆ ನೈಟ್ ಕರ್ಫ್ಯೂ ಮುಂದುವರಿಯಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ನಿರ್ದಿಷ್ಟ ವ್ಯಾಪಾರ ವಹಿವಾಟು ಹೊರತಾಗಿಸಿ ಬಹುತೇಕ ಎಲ್ಲ ವ್ಯಾಪಾರ ಮೊದಲಿನಂತೆ ಇರಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಕೋವಿಡ್-19ರ 2ನೇ ಅಲೆ ಸಾಂಕ್ರಾಮಿಕ ರೋಗ ಹರಡದಂತೆ ಸೂಕ್ತ ಮುಂಜಾಗ್ರತಾ ಕ್ರಮವಾಗಿ ಜೂ.21ರ ಬೆಳಗ್ಗೆ 6 ಗಂಟೆಯಿಂದ ಜು.5ರ ಬೆಳಗ್ಗೆ 5 ಗಂಟೆವರೆಗೆ ಜಿಲ್ಲಾದ್ಯಂತ
ಕಂಟೈನ್‌ಮೆಂಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ ಕೆಲವೊಂದು ಚಟುವಟಿಕೆಗಳಿಗೆ ವಿನಾಯಿತಿ ನೀಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಸೋಂಕು ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಅಗತ್ಯ ವಸ್ತುಗಳು ಖರೀದಿ, ಅಗತ್ಯ ಸೇವೆಗಳು ಮತ್ತು ಇತರೆ ತುರ್ತು ವೈದ್ಯಕೀಯ ಸೇವೆಗಳು ಹಾಗೂ ಕೃಷಿ ಚಟುವಟಿಕೆಗಳನ್ನು ಒಳಗೊಂಡಂತೆ ಇನ್ನೂ ಕೆಲವು ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ. ಇನ್ನೂ ನಿತ್ಯ ಸಂಜೆ 7ರಿಂದ ಬೆಳಗ್ಗೆ 5 ಗಂಟೆವರೆಗೆ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ವಾರಂತ್ಯದ ಕರ್ಫ್ಯೂನ್ನು ಜೂ.25ರ ರಾತ್ರಿ 7ಗಂಟೆಯಿಂದ ಜೂ.28ರ ಬೆಳಗ್ಗೆ 5ರ ವರೆಗೆ ಹಾಗೂ ಜು.2ರ ರಾತ್ರಿ 7 ಗಂಟೆಯಿಂದ ಜು.5ರ ಬೆಳಗ್ಗೆ 5ರವರೆಗೆ ಜಾರಿಗೊಳಿಸಲಾಗುವುದು.
ಹವಾನಿಯಂತ್ರಿತ ಅಂಗಡಿಗಳು, ಹವಾನಿಯಂತ್ರಿತ ಶಾಪಿಂಗ್ ಸಂಕೀರ್ಣಗಳು, ಮಾಲ್‌ಗಳನ್ನು ಹೊರತುಪಡಿಸಿ ಎಲ್ಲ ಅಂಗಡಿಗಳಿಗೆ ಬೆಳಗ್ಗೆ 6ರಿಂದ ಸಂಜೆ 5ರವರೆಗೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಹವಾನಿಯಂತ್ರಿತ ಹೊರತುಪಡಿಸಿ ಎಲ್ಲ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಬಾರ್ ಗಳು ಮತ್ತು ಕ್ಲಬ್‌ಗಳು ಬೆಳಗ್ಗೆ 6ರಿಂದ ಸಂಜೆ 5ರವರೆಗೆ ಆಸನದ ಸಾಮರ್ಥ್ಯ 50ರಷ್ಟು ಮೀರದಂತೆ ಕೆಲಸ ನಿರ್ವಹಿಸಬಹುದು. ಆದರೆ, ಬಾರ್, ರೆಸ್ಟೋರೆಂಟ್, ಕ್ಲಬ್‌ಗಳಲ್ಲಿ ಕುಳಿತು ಮದ್ಯ ಸೇವಿಸಲು ಅನುಮತಿ ಇರುವುದಿಲ್ಲ. ವಾರಂತ್ಯದ ಕರ್ಫ್ಯೂ ವೇಳೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅನುಮತಿಸಲಾಗಿದೆ.
ಸಾರಿಗೆ ಬಸ್ ಸಂಚಾರ ಆರಂಭ: ಇನ್ನೂ ಮುಖ್ಯವಾಗಿ ಸಾರಿಗೆ ಬಸ್‌ಗಳ ಸಂಚಾರ ಕೂಡ ಆರಂಭವಾಗಲಿದ್ದು, ಜಿಲ್ಲೆಯಲ್ಲಿ ಸೋಮವಾರದಿಂದ 100 ಬಸ್‌ಗಳು ಓಡಾಟ ಆರಂಭಿಸಲಿವೆ. ರಸ್ತೆಗಿಳಿಯಲಿವೆ. ಪ್ರತಿ ಬಸ್ ನಲ್ಲಿ ಕೇವಲ 30 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಲ್ಲದೇ, ವ್ಯಾಕ್ಸಿನೇಶನ್ ಹಾಗೂ ಕೊರೊನಾ ನೆಗೆಟಿವ್ ಇರುವ ಸಿಬ್ಬಂದಿಗೆ ಮಾತ್ರ ಸೇವೆಗೆ ಬರಲು ತಿಳಿಸಲಾಗಿದೆ. ಅಲ್ಲದೇ, ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಈಗಾಗಲೇ ಬಸ್ ಗಳು, ನಿಲ್ದಾಣಗಳು ಹಾಗೂ ಡಿಪೋಗಳನ್ನು ಸ್ಯಾನಿಟೈಸೇಶನ್ ಮಾಡಿಸಲಾಗಿದೆ. ಅಲ್ಲದೇ ನಿತ್ಯ ಸ್ಯಾನಿಟೈಸೇಶನ್ ಮಾಡುವಂತೆಯೂ ತಿಳಿಸಲಾಗಿದೆ ಎಂದು ವಿವರಿಸುತ್ತಾರೆ ಅಧಿಕಾರಿಗಳು
ಜೂ.21ರಿಂದ ಸಾರಿಗೆ ಬಸ್ ಸಂಚಾರಕ್ಕೆ ಅವಕಾಶ ಮಾಡಲಾಗಿದೆ. ಈಗಾಗಲೇ ನಮ್ಮ ನಿಗಮದ ಶೇ.96ರಷ್ಟು ಸಿಬ್ಬಂದಿ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಅದರ ಜತೆಗೆ ಕೊರೊನಾ ನೆಗೆಟಿವ್ ವರದಿ ಇದ್ದವರು ಮಾತ್ರ ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ. ತೆಲಂಗಾಣ, ಮಹಾರಾಷ್ಟ್ರಕ್ಕೆ ಅನುಮತಿ ಸಿಕ್ಕಿದ್ದು, ಸದ್ಯಕ್ಕೆ ಹೈದರಾಬಾದ್ ಗೆ ಮಾತ್ರ ಬಸ್ ಓಡಿಸಲಾಗುವುದು. ಕ್ರಮೇಣ ಬೇಡಿಕೆಯನುಸಾರ ಎಲ್ಲ ಕಡೆ ಸಂಚಾರಕ್ಕೆ ಮುಕ್ತ ಮಾಡಲಾಗುವುದು.
ವೆಂಕಟೇಶ, ವಿಭಾಗೀಯ
ನಿಯಂತ್ರಕರು, ಸಾರಿಗೆ ವಿಭಾಗ