ರಾಯಚೂರು: ಮಕ್ಕಳ ಹಕ್ಕುಗಳ ರಕ್ಷಣೆ, ಬಾಲ್ಯವಿವಾಹದಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಕಾನೂನಿನ ತಿಳಿವಳಿಕೆ ಬಹಳ ಮುಖ್ಯ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಮಂಗಳಾ ಹೆಗಡೆ ಹೇಳಿದರು.
ನಗರದ ನವಯುಗ ಪ.ಪೂ. ಕಾಲೇಜ್‌ನಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ರಕ್ಷಣೆ, ಬಾಲ್ಯವಿವಾಹ, ಬಾಲಾ ಕಾರ್ಮಿಕ ಪದ್ಧತಿ ನಿಷೇಧ, ಪೋಕ್ಸೋ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೋಕ್ಸೋ ಕಾಯ್ದೆ ಮಕ್ಕಳ ರಕ್ಷಣೆ ಕಾಯ್ದೆ ಆಗಿರುವುದರಿಂದ ಮಕ್ಕಳೇ ಅದರ ಸದ್ಬಳಕೆ ಮಾಡಿಕೊಳ್ಳಬೇಕು. ಸುತ್ತಲಿರುವ ಮಕ್ಕಳಿಗೆ ಈ ಕಾಯ್ದೆಗಳ ಬಗ್ಗೆ ತಿಳಿವಳಿಕೆ ನೀಡುವ ಅಗತ್ಯವಿದೆ. ಸರ್ಕಾರದ ಯೋಜನೆಗಳ ಕುರಿತು ಮತ್ತು ಬಾಲಮಂದಿರಗಳ ಕುರಿತು ಸೂಕ್ತ ಜಾಗೃತಿ ಮೂಡಿಸಬೇಕು. ಮಕ್ಕಳ ಮೇಲಾಗುತ್ತಿರುವ ಯಾವುದೇ ರೀತಿಯ ದೌರ್ಜನ್ಯಗಳು ಕಂಡು ಬಂದಲ್ಲಿ ತಕ್ಷಣ ಮಕ್ಕಳ ಸಹಾಯವಾಣಿ ಅಥವಾ ಮಕ್ಕಳ ಕಲ್ಯಾಣ ಸಮಿತಿ ಮೂಲಕ ಸಂಬಂಧಿಸಿದ ಇಲಾಖೆಗಳಿಗೆ ಮಾಹಿತಿ ನೀಡಬೇಕು ಎಂದರು.
ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಪ್ರಭುದೇವ ಪಾಟೀಲ, ಕಾಲೇಜು ವಿದ್ಯಾರ್ಥಿಗಳಿಗೆ ಮಕ್ಕಳ ಕಾಯ್ದೆಗಳ ಬಗ್ಗೆ ಪೋಕ್ಸೋ ಕಾಯ್ದೆ, ಬಾಲ್ಯವಿವಾಹ ಕಾಯ್ದೆಗಳ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ನವಯುಗ ಕಾಲೇಜಿನ ಪ್ರಾಚಾರ್ಯ ರವಿರಾಜ ಡಿ. ಮಾತನಾಡಿ, ಎಲ್ಲ ಕಾಲೇಜಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಮಾಡುವುದರಿಂದ ಮಕ್ಕಳ ರಕ್ಷಣೆ ಮತ್ತು ಪೋಷಣೆ ಮಾಡಲು ಅನುಕೂಲವಾಗಲಿದೆ ಎಂದರು.
ಮಕ್ಕಳ ರಕ್ಷಣಾಧಿಕಾರಿ ಕಿರಲಿಂಗಪ್ಪ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಾಮಾಜಿಕ ಕಾರ್ಯಕರ್ತ ತಿಕ್ಕಯ್ಯ ಮಾತನಾಡಿದರು. ಸಾಂಸ್ಥಿಕ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಹನುಮೇಶ, ನವಯುಗ ಪ.ಪೂ. ಕಾಲೇಜಿನ ಉಪನ್ಯಾಸಕ ಶಾಂತಮೂರ್ತಿ, ದಿನೇಶಕುಮಾರ, ನರಸಿಂಹಲು ಎನ್, ರಿಜ್ವಾನಾ ಸೇರಿ ಇತರರು ಪಾಲ್ಗೊಂಡಿದ್ದರು.