ರಾಯಚೂರು: ಪ್ಲಾಸ್ಟಿಕ್ ಕಸ ಕಡ್ಡಿಯಿಂದ ಹಾಳಾಗಿ ಹೋಗಿದ್ದ ಇಲ್ಲಿನ ವಾಸವಿ ನಗರದ ಪುರಾತನ ಬಾವಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ರವಿವಾರ ಸ್ವಚ್ಛಗೊಳಿಸಲಾಯಿತು.
ಬೆಳ್ಳಂಬೆಳಗ್ಗೆ ಕೈಗೆ ಗ್ಲೌಸ್ ಗಳನ್ನು ಹಾಕಿಕೊಂಡು ಖುದ್ದು ಎಸ್ಪಿಯೇ ಬಾವಿಗಿಳಿದ ಕಾರಣ ಇದರಿಂದ ಪ್ರೇರಿತರಾಗಿ ಅನೇಕ ಯುವಕರು ಕೂಡ ಸ್ವಚ್ಛತಾ ಕಾರ್ಯಕ್ಕೆ ಮುಂದಾದರು.
ಈ ಬಾವಿಯಲ್ಲಿ ಜನರು ದೇವರ ಪೂಜಾ ಸಾಮಗ್ರಿ ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಹಾಕಿದ್ದರಿಂದ ಸಂಪೂರ್ಣ ಮುಚ್ಚಿ ಹೋಗಿತ್ತು. ಇದನ್ನು ಗಮನಿಸಿದ ಜಿಲ್ಲಾ ಪೋಲಿಸ್ ಅಧೀಕ್ಷಕರು ನಗರದ ಗ್ರೀನ್ ರಾಯಚೂರು ಹಾಗೂ ಇನ್ನಿತರ ಸಂಘಗಳ ಜೊತೆಗೆ ಸೇರಿ ಈ ಸ್ವಚ್ಛತಾ ಆಂದೋಲನಕ್ಕೆ ಕರೆ ನೀಡಿದ್ದರು. ಸಾಕಷ್ಟು ತ್ಯಾಜ್ಯವನ್ನು ವಿಲೇವಾರಿ ಮಾಡಲಾಯಿತು. ಸಂಘ ಸಂಸ್ಥೆಗಳ ಸದಸ್ಯರು,
17 ನೇ ವಾರ್ಡ್ ನ ಜನರು ಸೇರಿಂದಂತೆ ಹಾಗೂ ನಗರಸಭೆ ಅಧಿಕಾರಿಗಳು ಪಾಲ್ಗೊಂಡು ಅಭಿಯಾನಕ್ಕೆ ಕೈ ಜೋಡಿಸಿದರು.
ಇದೇ ವೇಳೆ ಬಡಾವಣೆಯಲ್ಲಿ ಸಸಿಗಳನ್ನು ನೆಡಲಾಯಿತು. ಬಾವಿಗೆ ಅನಗತ್ಯ ತ್ಯಾಜ್ಯವನ್ನು ಬಾವಿಗೆ ಎಸೆಯದಂತೆ ತಿಳಿವಳಿಕೆ ನೀಡಲಾಯಿತು.