Advertisement

‘ವಿದ್ಯಾರ್ಥಿ ವೇತನ ಸ್ಥಗಿತ ಆದೇಶ ಹಿಂಪಡೆಯಿರಿ’

01:34 PM Nov 10, 2019 | Naveen |

ರಾಯಚೂರು: ಮೆಟ್ರಿಕ್‌ ಪೂರ್ವ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ಸ್ಥಗಿತಗೊಳಿಸಿದ ಸರ್ಕಾರದ ಧೋರಣೆ ಖಂಡಿಸಿ ಶುಕ್ರವಾರ ಎಐಡಿಎಸ್‌ಒ ನೇತೃತ್ವದಲ್ಲಿ ವಿವಿಧ ಶಾಲೆ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಈ ಕುರಿತು ಜಿಲ್ಲಾಧಿಕಾರಿ ಮೂಲಕ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿ, 2019-20ನೇ ಸಾಲಿನಿಂದ ಹೊಸ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನಕ್ಕೆ ಪರಿಗಣಿಸುವುದಿಲ್ಲ ಎಂಬ ಆದೇಶ ಹೊರಡಿಸಲಾಗಿದೆ. ಹಿಂದೆ 2 ರಿಂದ 10ನೇ ತರಗತಿವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಬಿಸಿಎಂ ಇಲಾಖೆಯಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿತ್ತು. ಆದರೆ, ಈಗ ಹೊರಡಿಸಿರುವ ನೂತನ ಆದೇಶದಿಂದ ಅನುದಾನದ ನೆಪವೊಡ್ಡಿ ವಿದ್ಯಾರ್ಥಿ ವೇತನ ಕಡಿತಗೊಳಿಸುತ್ತಿರುವ ಕ್ರಮದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ.ಇದು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವ್ಯಾಸಂಗಕ್ಕೂ ತೊಡಕಾಗಬಹುದು ಎಂದರು.

ಮುಂದಿನ ಶೈಕ್ಷಣಿಕ ಸಾಲಿನಿಂದ ಅಲೆಮಾರಿ ಅರೆ ಅಲೆಮಾರಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ 8ರಿಂದ 10ನೇ ತರಗತಿವರೆಗೆ ನವೀಕರಣಗೊಂಡ ವಿದ್ಯಾರ್ಥಿಗಳನ್ನು ಮಾತ್ರ ಪರಿಗಣಿಸಲು ತಿರ್ಮಾನಿಸಿದೆ. ಅನುದಾನದ ಕೊರತೆಯಿದ್ದರೆ ಅದನ್ನು ಹೆಚ್ಚುಗೊಳಿಸಬೇಕೆ ವಿನಃ ವೇತನ ಕಡಿತಗೊಳಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ವಿದ್ಯಾರ್ಥಿ ವೇತನ ಅವಲಂಬಿಸಿಯೇ ಅನೇಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅಂಥ ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನೇ ಮೊಟಕುಗೊಳಿಸಬೇಕಾಗುತ್ತದೆ. ಸರ್ಕಾರದ ಈ ವಿದ್ಯಾರ್ಥಿ ವಿರೋಧಿ ಆದೇಶ ರದ್ದುಗೊಳಿಸಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಒತ್ತಾಯಿಸಿದರು. ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಮಹೇಶ ಚೀಕಲಪರ್ವಿ, ಕಾರ್ಯದರ್ಶಿ ಪೀರ್‌ಸಾಬ್‌ ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next