ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ರಾಜ್ಯ ಪ್ರವಾಸ, “ಚರ್ವಿತ ಚರ್ವಣ’ದಂತಿತ್ತು. ಮೊದಲ ದಿನ ಮಾಡಿದ ಭಾಷಣದ ಜೆರಾಕ್ಸ್ ಕಾಪಿಯನ್ನೇ 2 ಮತ್ತು 3ನೇ ದಿನ ಓದುವ ಮೂಲಕ ವಿಷನ್ ಇಲ್ಲದ ನಾಯಕ ಹೇಗೆ ಮಾತಾಡಬಹುದು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದರು.
ರಾಹುಲ್ ಗಾಂಧಿ “ರಿಜನಲ್’ ನಾಯಕ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ “ನ್ಯಾಷನಲ್’ ಲೀಡರ್ ಎಂಬಂತೆ ಕಾಂಗ್ರೆಸ್ ಸಮಾವೇಶದಲ್ಲಿ ಬಿಂಬಿಸಲಾಗಿದೆ.
ಇಂತಹ ಸಮಾವೇಶಗಳಲ್ಲಿ ರಾಷ್ಟ್ರೀಯ ನಾಯಕರು ಕೊನೆಯಲ್ಲಿ ಮಾತಾನಾಡುವುದು ವಾಡಿಕೆ. ಆದರೆ, ರಾಹುಲ್ ಗಾಂಧಿಯವರ ಹೆಸರಿನಲ್ಲಿ ಜನ ಸೇರಿಸಿರುವ ಕಾಂಗ್ರೆಸ್, ಸಮಾವೇಶದಲ್ಲಿ ಸಿದ್ದರಾಮಯ್ಯ ಅವರಿಗೆ ಕೊನೆಯಲ್ಲಿ ಭಾಷಣ ಮಾಡಲು ಅವಕಾಶ ನೀಡುತ್ತಿದ್ದರು. ಇದನ್ನು ಕಾಂಗ್ರೆಸ್ ಅರ್ಥಮಾಡಿಕೊಳ್ಳಬೇಕಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಹುಲ್ ಎಐಸಿಸಿ ಅಧ್ಯಕ್ಷರಾದಾಗಲೂ ದೇವಸ್ಥಾನಕ್ಕೆ ಹೋಗಿರಲಿಲ್ಲ. ಗುಜರಾತ್ ಮತ್ತು ಕರ್ನಾಟಕದಲ್ಲಿ ಚುನಾವಣೆಗಾಗಿ ದೇವಸ್ಥಾನಕ್ಕೆ ಸುತ್ತುತ್ತಿದ್ದಾರೆ ಎಂದು ದೂರಿದರು. ರಾಹುಲ್ ಉಡುಪಿಗೆ ಬಂದಾಗ ಶ್ರೀಕೃಷ್ಣ ಮಠಕ್ಕೂ ಹೋಗಬಹುದು ಎಂಬ ನಿರೀಕ್ಷೆ ಇದೆ. ಸಿದ್ದರಾಮಯ್ಯ ಅವರು 6 ಬಾರಿ ಉಡುಪಿಗೆ ಬಂದು ಹೋಗಿದ್ದಾರೆ. ಹಿರಿಯ ಮಠಾಧೀಶರಾದ ಪೇಜಾವರ ಶ್ರೀಗಳು ಖುದ್ದಾಗಿ ಮನವಿ ಮಾಡಿದ್ದರೂ, ಮಠಕ್ಕೆ ಭೇಟಿ ನೀಡಿರಲಿಲ್ಲ. ಈಗ ಚುನಾವಣೆಗಾಗಿ ಮಠ, ದೇವಸ್ಥಾನ ಸುತ್ತಿದ್ದಾರೆ. ಇದರಿಂದ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ ಎಂದರು.