ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ವಿದಾಯ ಹೇಳಿದ ಬೆನ್ನಲ್ಲೇ ಆ ಪಕ್ಷದಲ್ಲಿ ಭಾವೋದ್ವೇಗ, ಖನ್ನತೆ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಗಾಂಧಿ ಕುಟುಂಬದ ಸದಸ್ಯರ ನೇತೃತ್ವವಿಲ್ಲದ ಕಾಂಗ್ರೆಸ್ಸನ್ನು ಊಹಿಸಿಕೊಳ್ಳುವುದೂ ಕಷ್ಟ ಎಂಬಂಥ ಆತಂಕ ಪಕ್ಷದ ಹಿರಿಯ ನಾಯಕರಲ್ಲಿ ಕಂಡುಬಂದಿದೆ.
‘ಪಕ್ಷದ ಮುಂದಿನ ಅಧ್ಯಕ್ಷ ಯಾರಾಗಬೇಕು?’ ಎಂಬುದರ ಬಗ್ಗೆ ಗಾಂಧಿ ಕುಟುಂಬವೇ ನಿರ್ಧರಿಸಲಿ ಎಂಬ ನಿರ್ಧಾರಕ್ಕೆ ಹಿರಿಯ ನಾಯಕರು ಬಂದಿದ್ದಾರೆ.
‘ಗಾಂಧಿ ಕುಟುಂಬವು ಕಾಂಗ್ರೆಸ್ ಪಕ್ಷದ ಅವಿಭಾಜ್ಯ ಅಂಗ. ಏನೇ ನಿರ್ಧಾರ ಕೈಗೊಂಡರೂ ಅವರ ಸಲಹೆಯನ್ನು ಪಡೆದೇ ತೀರುತ್ತೇವೆ. ಹಾಗಾಗಿ, ಮುಂದಿನ ವಾರ ನಡೆಯಲಿರುವ ಪಕ್ಷದ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಮುಂದಿನ ನಾಯಕತ್ವದ ಬಗ್ಗೆ ಅವರ ಸಲಹೆಯನ್ನು ಕೇಳಲಾಗುತ್ತದೆ’ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿರುವುದು ಇದಕ್ಕೆ ಪುಷ್ಠಿ ನೀಡಿದೆ.
ನಿರ್ಗಮನ- ಶುಭಶಕುನ? ರಾಜಕೀಯ ಪಂಡಿತರು ‘ರಾಹುಲ್ ನಿರ್ಗಮನ, ಪಕ್ಷಕ್ಕೆ ಶುಭ ಶಕುನ’ ಎಂದಿದ್ದಾರೆ. ಲೋಕಸಭಾ ಚುನಾವಣೆಯ ಹೀನಾಯ ಸೋಲನ್ನು ಹಿಂದಿಕ್ಕಿ ಪಕ್ಷವು ಮುಂಬರುವ ದಿನಗಳಲ್ಲಿ ಹಂತಹಂತವಾಗಿ ಫೀನಿಕ್ಸ್‌ನಂತೆ ಎದ್ದು ಬರುತ್ತದೆ ಎಂದು ಹಲವಾರು ರಾಜಕೀಯ ಪಂಡಿತರು ತಿಳಿಸಿದ್ದಾರೆ.
ರಾಹುಲ್ಗೆ ಪ್ರಿಯಾಂಕಾ ಬೆಂಬಲ: ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ರಾಹುಲ್ ಗಾಂಧಿಯವರ ನಿರ್ಧಾರವನ್ನು ತಾವು ಬೆಂಬಲಿಸುವುದಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ತಿಳಿಸಿದ್ದಾರೆ. ‘ಕೆಲವರಿಗೆ ಮಾತ್ರ ಇಂಥ ನಿರ್ಧಾರಗಳನ್ನು ತೆಗೆದುಕೊಳ್ಳುವ ಛಾತಿ ಇರುತ್ತದೆ. ರಾಹುಲ್ ನಿರ್ಧಾರವನ್ನು ಸ್ವಾಗತಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ರಾಹುಲ್ಗೆ ಜಾಮೀನು: ಕರ್ನಾಟಕದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರ್‌ಎಸ್‌ಎಸ್-ಬಿಜೆಪಿ ವಿರುದ್ಧ 2017ರಲ್ಲಿ ನೀಡಿದ್ದ ಹೇಳಿಕೆಗೆ ಸಂಬಂಧಿಸಿ ತಮ್ಮ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಗಾಗಿ ರಾಹುಲ್ ಗಾಂಧಿ ಹಾಗೂ ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಗುರುವಾರ, ಮಹಾರಾಷ್ಟ್ರದ ಮೆಟ್ರೊ ಪಾಲಿಟನ್ ನ್ಯಾಯಾಲಯಕ್ಕೆ ಹಾಜರಾದರು. ವಿಚಾರಣೆ ವೇಳೆ, ತಮ್ಮ ಹೇಳಿಕೆಗಳನ್ನು ಇಬ್ಬರೂ ಸಮರ್ಥಿಸಿಕೊಂಡ ಹಿನ್ನೆಲೆಯಲ್ಲಿ, ಮುಂದಿನ ವಿಚಾರಣೆಯನ್ನು ಸೆ. 22ಕ್ಕೆ ಮುಂದೂಡಿತು.