ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ ಮೇಲೆ ಮಾತನಾಡಿದ ರಾಹುಲ್, ಸುಮಾರು ಒಂದು ತಾಸು ಮೋದಿ, ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿ ಅನಂತರ, “ನನಗೆ ಮೋದಿ ಮೇಲೆ ವೈಯಕ್ತಿಕ ದ್ವೇಷವಿಲ್ಲ’ ಎಂದು ಹೇಳಿ ಪ್ರಧಾನಿ ಬಳಿಸಾರಿ ಅವರನ್ನು ಆಲಿಂಗಿಸಿದ್ದು ಅಚ್ಚರಿ ಮೂಡಿಸಿದೆ.
Advertisement
ಪ್ರಧಾನಿ ಮೋದಿಯ ಒತ್ತಡಕ್ಕೆ ಮಣಿದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಜನರಿಗೆ ಸುಳ್ಳು ಹೇಳಿದ್ದಾರೆ. ರಫೇಲ್ ಡೀಲ್‌ನಿಂದಾಗಿ ಯಾರಿಗೆ ನೆರವಾಗಿದೆ ಎಂದು ಜನರಿಗೆ ತಿಳಿಸಿ. ರಫೇಲ್ ಒಪ್ಪಂದದ ವಿವರ ಬಹಿರಂಗಗೊಳಿಸಬಾರದು ಎಂದು ಭಾರತ ಸರಕಾರ ಹೇಳುತ್ತಿದೆ. ಇದು ನಿಜವೇ ಎಂದು ಫ್ರಾನ್ಸ್ ಅಧ್ಯಕ್ಷರನ್ನು ಕೇಳಿದೆ. ಆದರೆ ಅವರು ಅಂಥ ಯಾವುದೇ ಷರತ್ತು ಇಲ್ಲ ಎಂದಿದ್ದರು ಎಂದು ರಾಹುಲ್ ಹೇಳಿದ್ದಾರೆ. ರಫೇಲ್ ಡೀಲ್‌ನಿಂದಾಗಿ 35 ಸಾವಿರ ಕೋ.ರೂ. ಸಾಲದಲ್ಲಿರುವ ಉದ್ಯಮಿಗೆ ನೆರವು ನೀಡಿದ್ದಾರೆ. ಇವರಿಗೆ 45 ಸಾವಿರ ಕೋಟಿ ರೂ. ಮೌಲ್ಯದ ಯೋಜನೆಯನ್ನು ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
Related Articles
Advertisement
ಮೋದಿ ನಗು!: ಮೋದಿ ನಗುತ್ತಿದ್ದರೂ ಅವರ ನಗುವಿನಲ್ಲಿ ಒಂದು ರೀತಿಯ ಒತ್ತಡವಿದೆ. ಅವರು ಅಲ್ಲೆಲ್ಲೋ ನೋಡುತ್ತಿದ್ದಾರೆ. ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿಲ್ಲ ಎಂದು ರಾಹುಲ್ ಹೇಳಿದರು.
ರಾಹುಲ್ ವಿರುದ್ಧ ಹಕ್ಕುಚ್ಯುತಿ ಮಂಡನೆಸರಕಾರದ ವಿರುದ್ಧ ಆಧಾರರಹಿತ ಆರೋಪ ಮಾಡಿದ ರಾಹುಲ್ ವಿರುದ್ಧ ಹಕ್ಕುಚ್ಯುತಿ ಮಂಡಿಸುತ್ತೇವೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಹೇಳಿದ್ದಾರೆ. ಅವರ ವರ್ತನೆ ಬಾಲಿಶವಾಗಿತ್ತು. ಕಾಂಗ್ರೆಸ್ ಅಧ್ಯಕ್ಷರು ಇಷ್ಟು ತಪ್ಪುಮಾಹಿತಿ ಹಾಗೂ ಬಾಲಿಶತನವನ್ನು ಪ್ರದರ್ಶಿಸಿದ್ದು ದುರದೃಷ್ಟಕರ ಎಂದಿದ್ದಾರೆ. ಪ್ರತಿಕ್ರಿಯೆ ನೀಡಿದ ಫ್ರಾನ್ಸ್, ಸೀತಾರಾಮನ್: ರಫೇಲ್ ಡೀಲ್ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸದನದಲ್ಲೇ ಪ್ರತಿಕ್ರಿಯೆ ನೀಡಿದ್ದು, ರಾಹುಲ್ ಸುಳ್ಳಾಡುತ್ತಿದ್ದಾರೆ ಎಂದಿದ್ದಾರೆ. ಫ್ರಾನ್ಸ್ ಅಧ್ಯಕ್ಷರು ಟಿವಿ ಚಾನೆಲ್‌ಗಳಿಗೆ ನೀಡಿದ ಸಂದರ್ಶನದಲ್ಲೇ, ಒಪ್ಪಂದದ ವಿವರಗಳನ್ನು ಬಹಿರಂಗಗೊಳಿಸದಿರುವ ಷರತ್ತುಗಳಿವೆ ಎಂದಿದ್ದಾರೆ. ಈ ಒಪ್ಪಂದ ಯುಪಿಎ ಸರಕಾರವಿದ್ದಾಗಲೇ, 2008ರಲ್ಲಿ ನಡೆದಿದೆ. ರಾಹುಲ್ ಹೇಳಿದ್ದೆಲ್ಲ ಅಕ್ಷರಶಃ ಸುಳ್ಳು ಮತ್ತು ಆಧಾರರಹಿತ ಎಂದು ಸೀತಾರಾಮನ್ ನುಡಿದಿದ್ದಾರೆ. ಫ್ರಾನ್ಸ್ ಸ್ಪಷ್ಟನೆ: ಇನ್ನೊಂದೆಡೆ 2008ರ
ಒಪ್ಪಂದದಲ್ಲಿ ರಫೇಲ್ ಡೀಲ್‌ನ ಮಾಹಿತಿ ಬಹಿರಂಗಗೊಳಿಸದಂತೆ ಷರತ್ತು ಇದೆ ಎಂದು ಫ್ರಾನ್ಸ್ ಸರಕಾರ ಸ್ಪಷ್ಟನೆ ನೀಡಿದೆ. ರಾಹುಲ್ ನೀಡಿದ ಹೇಳಿಕೆಯನ್ನು ನಾವು ಗಮನಿಸಿದೆವು. ಅದಕ್ಕೆ ಈ ಸ್ಪಷ್ಟೀಕರಣ ನೀಡುತ್ತಿದ್ದೇವೆ ಎಂದೂ ಹೇಳಿದೆ. ಆದರೆ ರಹಸ್ಯ ದಾಖಲೆಗಳ ವ್ಯಾಪ್ತಿಗೆ ರಫೇಲ್ ವಿಮಾನಗಳ ದರವೂ ಬರುತ್ತದೆಯೇ ಎಂಬುದನ್ನು ಫ್ರಾನ್ಸ್ ಸ್ಪಷ್ಟಪಡಿಸಿಲ್ಲ. ಮೋದಿ ಅಪ್ಪಿ , ಕಣ್ಣು ಹೊಡೆದ ರಾಹುಲ್!
ನನ್ನ ಮೇಲೆ ಬಿಜೆಪಿಯವರಿಗೆ ಸಿಟ್ಟಿರಬಹುದು. ನನ್ನನ್ನು ಪಪ್ಪು ಎಂದೂ ನೀವು ಕರೆಯಬಹುದು. ಆದರೆ ನನಗೆ ಯಾವುದೇ ವೈಯಕ್ತಿಕ ದ್ವೇಷ ಅಥವಾ ಸಿಟ್ಟಿಲ್ಲ ಎಂದು ರಾಹುಲ್ ತಮ್ಮ ಮಾತಿನ ಕೊನೆಯಲ್ಲಿ ಹೇಳಿದರು. ಅಷ್ಟು ಹೇಳಿ ಕುಳಿತಿದ್ದ ಮೋದಿ ಬಳಿ ಬಂದು ಕೈಕುಲುಕಿ ಅಪ್ಪಿಕೊಂಡರು. ವಾಪಸು ಹೊರಟಿದ್ದ ರಾಹುಲ್‌ರನ್ನು ಮತ್ತೆ ಬಳಿ ಕರೆದ ಮೋದಿ, ಕಿವಿಯಲ್ಲಿ ಏನೋ ಹೇಳಿ ಬೆನ್ನು ತಟ್ಟಿ ಕಳುಹಿಸಿದರು. ಅನಂತರ ತನ್ನ ಆಸನಕ್ಕೆ ಮರಳಿದ ರಾಹುಲ್, ಸದನದಲ್ಲಿ ಕುಳಿತ ಯಾರನ್ನೋ ನೋಡಿ ಕಣ್ಣು ಹೊಡೆದರು. ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಸ್ಪೀಕರ್ ಸುಮಿತ್ರಾ ಮಹಾಜನ್, “ಇದೆಂಥ ನಾಟಕ ಮಾಡುತ್ತಿದ್ದೀರಿ. ಅವರು ಪ್ರಧಾನಿ. ಸದನದಲ್ಲಿ ಶಿಷ್ಟಾಚಾರ ಪಾಲಿಸಬೇಕು’ ಎಂದರು. ಮೋದಿಯವರನ್ನು ರಾಹುಲ್ ಅಪ್ಪಿಕೊಂಡದ್ದು ಹಾಗೂ ಬಳಿಕ ಕಣ್ಣು ಮಿಟುಕಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.