Advertisement

Parliament; ಹಿಂದೂಗಳು ಎಂದು ಹೇಳಿಕೊಳ್ಳುವವರು… ರಾಹುಲ್ ಹೇಳಿಕೆ ವಿರುದ್ಧ ಬಿಜೆಪಿ ಆಕ್ರೋಶ

05:22 PM Jul 01, 2024 | Team Udayavani |

ಹೊಸದಿಲ್ಲಿ: ಲೋಕಸಭಾ ಕಲಾಪದಲ್ಲಿ ಸೋಮವಾರ ಆಡಳಿತಾರೂಢ ಬಿಜೆಪಿ ವಿರುದ್ಧ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸುವ ವೇಳೆ ”ತಮ್ಮನ್ನು ತಾವು ಹಿಂದೂ ಎಂದು ಹೇಳಿಕೊಳ್ಳುವವರು ಹಗಲಿರುಳು ಹಿಂಸಾಚಾರ ಮತ್ತು ದ್ವೇಷದಲ್ಲಿ ತೊಡಗಿದ್ದಾರೆ” ಎಂದು ಹೇಳಿಕೆ ನೀಡಿದ್ದು ಕೋಲಾಹಲಕ್ಕೆ ಕಾರಣವಾಗಿದೆ. ಬಿಜೆಪಿ ಸಂಸದರು ವ್ಯಾಪಕ ಆಕ್ರೋಶ ಹೊರ ಹಾಕುತ್ತಿದ್ದಾರೆ.

Advertisement

ಸಮಸ್ತ ಹಿಂದೂ ಸಮಾಜವನ್ನು ಹಿಂಸಾತ್ಮಕ ಎಂದು ಕರೆಯುವುದು ಗಂಭೀರ ವಿಷಯ ಎಂದು ಪ್ರಧಾನಿ ಮೋದಿ ತಿರುಗೇಟು ನೀಡಿದರು. ರಾಹುಲ್ ಗಾಂಧಿ ಹೇಳಿಕೆ ನೀಡುತ್ತಿದ್ದಂತೆ ಆಡಳಿತಾರೂಢ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ಹೊರ ಹಾಕಿದರು.

ಹೇಳಿಕೆ ಸಮರ್ಥಿಸಿಕೊಂಡ ರಾಹುಲ್ ಗಾಂಧಿ ‘ನಾನು ಬಿಜೆಪಿ ಬಗ್ಗೆ ಮಾತನಾಡುತ್ತಿದ್ದೇನೆ. ಬಿಜೆಪಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಅಥವಾ ಮೋದಿ ಇಡೀ ಹಿಂದೂ ಸಮಾಜವಲ್ಲ ಎಂದರು. ರಾಹುಲ್ ಅವರು ಶಿವನ ಚಿತ್ರವನ್ನು ಸಹ ತೋರಿಸಿ, ದೇವರ ಸಂದೇಶವು ನಿರ್ಭಯತೆ ಮತ್ತು ಅಹಿಂಸೆಯ ಬಗ್ಗೆ ಇದೆ. ಇದೇ ವಿಷಯವನ್ನು ತಿಳಿಯಲು ಇತರ ಧರ್ಮಗಳ ಬೋಧನೆಗಳನ್ನು ಸಹ ಉಲ್ಲೇಖಿಸಿದರು.ನಾವು ಎಲ್ಲಾ ಧರ್ಮಗಳು ಧೈರ್ಯದ ಬಗ್ಗೆ ಮಾತನಾಡುತ್ತವೆ, ಇಸ್ಲಾಂ, ಕ್ರಿಶ್ಚಿಯನ್ ಧರ್ಮ, ಬೌದ್ಧ ಧರ್ಮ, ಜೈನ ಮತ್ತು ಸಿಖ್ ಧರ್ಮಗಳನ್ನು ಉಲ್ಲೇಖಿಸಿ ನಿರ್ಭಯತೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತವೆ ಎಂದರು.

ರಾಹುಲ್ ಗಾಂಧಿಯವರು ಶಿವನ ಚಿತ್ರವನ್ನು ತೋರಿಸಿದ ಬಳಿಕ ಸ್ಪೀಕರ್ ಓಂ ಬಿರ್ಲಾ ಅವರು ‘ಸದನದಲ್ಲಿ ಫಲಕಗಳನ್ನು ಪ್ರದರ್ಶಿಸಲು ನಿಯಮಗಳು ಅನುಮತಿಸುವುದಿಲ್ಲ’ ಎಂದು ನೆನಪಿಪಿಸಿದರು.

ಬಿಜೆಪಿಯು ಸಂವಿಧಾನ ಮತ್ತು ಭಾರತದ ಮೂಲಭೂತ ಕಲ್ಪನೆಯ ಮೇಲೆ ವ್ಯವಸ್ಥಿತ ದಾಳಿಗಳನ್ನು ನಡೆಸುತ್ತಿದೆ ಎಂದು ಆರೋಪಿಸಿ, ಆಡಳಿತ ಪಕ್ಷವು ಪ್ರಸ್ತಾಪಿಸಿದ ವಿಚಾರಗಳನ್ನು ಲಕ್ಷಾಂತರ ಜನರು ವಿರೋಧಿಸಿದ್ದಾರೆ ಎಂದರು.

Advertisement

‘ಪ್ರಧಾನಿ ಮೋದಿಯವರ ಆದೇಶದ ಮೇರೆಗೆ ನನ್ನ ಮೇಲೆ ದಾಳಿ ನಡೆದಿದೆ. ನನ್ನ ವಿರುದ್ಧ 20ಕ್ಕೂ ಹೆಚ್ಚು ಪ್ರಕರಣಗಳು ಹಾಕಲಾಗಿದೆ. ನನ್ನ ಮನೆಯನ್ನು ಕಿತ್ತುಕೊಳ್ಳಲಾಯಿತು, ಇ.ಡಿ. 55 ಗಂಟೆಗಳ ವಿಚಾರಣೆ ನಡೆಸಿತು. ಈ ಸವಾಲುಗಳ ನಡುವೆಯೂ ಸಂವಿಧಾನವನ್ನು ರಕ್ಷಿಸುವ ಸಾಮೂಹಿಕ ಪ್ರಯತ್ನದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ರಾಹುಲ್ ಗಾಂಧಿ ಹೇಳಿದರು.

ನನ್ನ ನಂತರ ಬಿಜೆಪಿಯವರು ಈಗ ‘ಜೈ ಸಂವಿಧಾನ್’ ಎಂದು ಹೇಳುತ್ತಿರುವುದು ಸಂತಸ ತಂದಿದೆ. ವಿರೋಧ ಪಕ್ಷದಲ್ಲಿರುವುದಕ್ಕೆ ನನಗೆ ಸಂತೋಷ ಮತ್ತು ಹೆಮ್ಮೆ ಇದೆ. ನಮಗೆ ಅಧಿಕಾರಕ್ಕಿಂತ ಮಿಗಿಲಾದದ್ದು ಸತ್ಯ,” ಎಂದರು.

‘ಪ್ರಧಾನಿ ನೇರವಾಗಿ ದೇವರೊಂದಿಗೆ ಮಾತನಾಡುತ್ತಾರೆ. ನಾವೆಲ್ಲರೂ ಜೈವಿಕವಾಗಿದ್ದೇವೆ ಆದರೆ ಪ್ರಧಾನಮಂತ್ರಿ ಅವರು ಜೈವಿಕವಲ್ಲದ ಜೀವಿ ಎಂದು ಹೇಳಿಕೊಳ್ಳುತ್ತಾರೆ. ಗಾಂಧಿ ಸತ್ತಿದ್ದಾರೆ ಮತ್ತು ಅವರು ಚಲನಚಿತ್ರದಿಂದ ಪುನರುಜ್ಜೀವನಗೊಂಡಿದ್ದಾರೆ ಎಂದು ಪ್ರಧಾನಿ ಹೇಳಿದರು. ನೀವು ಅಜ್ಞಾನವನ್ನು ಅರ್ಥಮಾಡಿಕೊಳ್ಳಬಹುದೇ? ಗಾಂಧಿ ಸತ್ತಿಲ್ಲ. ಗಾಂಧಿ ಬದುಕಿದ್ದಾರೆ’ ಎಂದು ರಾಹುಲ್ ಕಿಡಿ ಕಾರಿದರು.

ಕ್ಷಮೆಗೆ ಶಾ ಪಟ್ಟು
‘ತಮ್ಮನ್ನು ಹಿಂದೂಗಳೆಂದು ಗುರುತಿಸಿಕೊಳ್ಳುವುದರಲ್ಲಿ ಹೆಮ್ಮೆ ಪಡುವ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಕ್ಕಾಗಿ ರಾಹುಲ್ ಗಾಂಧಿ ಅವರು ಸದನ ಮತ್ತು ದೇಶದ ಕ್ಷಮೆ ಯಾಚಿಸಬೇಕು’ ಎಂದು ಗೃಹ ಸಚಿವ ಅಮಿತ್ ಶಾ ಪಟ್ಟು ಹಿಡಿದರು.

ತುರ್ತು ಪರಿಸ್ಥಿತಿ ಮತ್ತು 1984 ರ ಸಿಖ್ ವಿರೋಧಿ ಗಲಭೆಗಳ ಬಗ್ಗೆ ಮಾತನಾಡಿದ ಶಾ, ಗಾಂಧಿ ಅವರಿಗೆ ತಿರುಗೇಟು ನೀಡಿ ‘ಕಾಂಗ್ರೆಸ್ ದೇಶದಲ್ಲಿ “ಉಗ್ರವಾದ” ಹರಡಿದ್ದು ಅಹಿಂಸೆಯ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ಹಕ್ಕಿಲ್ಲ ಎಂದರು.

ಎಂದಿಗೂ ಹಿಂದೂಗಳನ್ನು ಅವಮಾನಿಸುವುದಿಲ್ಲ
ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರ ‘ಹಿಂದೂ’ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿ ‘ನನ್ನ ಸಹೋದರ ಎಂದಿಗೂ ಹಿಂದೂಗಳನ್ನು ಅವಮಾನಿಸುವುದಿಲ್ಲ. ಬಿಜೆಪಿ ಮತ್ತು ಅದರ ನಾಯಕರ ಬಗ್ಗೆ ಸ್ಪಷ್ಟವಾಗಿ ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next