Advertisement

ನಗರದಲ್ಲಿ ರಾಹುಲ್‌ ಸಂಚಲನ

12:23 PM May 10, 2018 | Team Udayavani |

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಬುಧವಾರ ದಿನವಿಡೀ ನಗರದಲ್ಲಿ ರೋಡ್‌ ಶೋ ನಡೆಸಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಗಾಂಧಿನಗರದಲ್ಲಿ ದಿನೇಶ್‌ಗುಂಡೂರಾವ್‌, ಬಿಟಿಎಂ ಲೇಔಟ್‌ನಲ್ಲಿ ರಾಮಲಿಂಗಾರೆಡ್ಡಿ, ಚಿಕ್ಕಪೇಟೆಯಲ್ಲಿ ಆರ್‌.ವಿ.ದೇವರಾಜ್‌, ಚಾಮರಾಜಪೇಟೆಯಲ್ಲಿ ಜಮೀರ್‌ ಅಹಮದ್‌, ಶಿವಾಜಿನಗರದಲ್ಲಿ ರೋಷನ್‌ಬೇಗ್‌, ಬಸನವಗುಡಿಯಲ್ಲಿ ಬೋರೇಗೌಡ ಪರ ಪ್ರಚಾರ ನಡೆಸಿದರು. ಈ ವೇಳೆ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಹುಲ್‌, ನಂತರ ಕಾಟನ್‌ ಪೇಟೆಯಲ್ಲಿರುವ
ಮಸ್ತಾನ್‌ ದರ್ಗಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

Advertisement

ಬೆಳಗ್ಗೆ 11.15ಕ್ಕೆ ಪೊಲೀಸರ ಬಿಗಿ ಭದ್ರತೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿದ ರಾಹುಲ್‌ ಗಾಂಧಿಗೆ ಅರ್ಚಕರು ಮಾಲಾರ್ಪಣೆ ಮಾಡಿ, ದೊಡ್ಡ ಗಣೇಶನ ಫೋಟೋವನ್ನು ಸ್ಮರಿಣಿಕೆಯಾಗಿ ನೀಡಿದರು. ಬಸವನಗುಡಿ ರಸ್ತೆಯಲ್ಲಿ ಜಮಾಯಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರು ರಾಹುಲ್‌ಗಾಂಧಿ ಮತ್ತು ಬಸವನಗುಡಿ ಕಾಂಗ್ರೆಸ್‌ ಅಭ್ಯರ್ಥಿ ಬೋರೇಗೌಡ ಪರ ಘೋಷಣೆ ಕೂಗಿದರು. 

ದೇವಸ್ಥಾನದ ಹೊರ ಬಂದ ರಾಹುಲ್‌, ರಾಮ ಕೃಷ್ಣ ಆಶ್ರಮ, ನ್ಯಾಷನಲ್‌ ಕಾಲೇಜು, ಲಾಲ್‌ ಬಾಗ್‌, ಅಶೋಕ ಪಿಲ್ಲರ್‌ ಮಾರ್ಗವಾಗಿ ತೆರೆದ ವಾಹನದಲ್ಲಿ ರೋಡ್‌ಶೋ ನಡೆಸುವಾಗ ಲಾಲಾ ಬಾಗ್‌ ರಸ್ತೆಯಲ್ಲಿರುವ ಎಂಟಿಆರ್‌ ಹೋಟೆಲ್‌ ನಲ್ಲಿ ಪೂರಿ ಮತ್ತು ಮಸಾಲದೋಸೆ ಸವಿದರು. 

ಆರೋಪ: ಬಿಜೆಪಿ ಸರ್ಕಾರದ ನೋಟು ಅಮಾನ್ಯ ನಿರ್ಣಯದಿಂದ ದೇಶದಲ್ಲಿ ಹಲವು ಫ್ಯಾಕ್ಟರಿಗಳು ಮುಚ್ಚಿ ಹೋಗಿದ್ದು, ಬೆಂಗಳೂರಿನ ಹಲವು ಗಾರ್ಮೆಂಟ್ಸ್‌ ಬಾಂಗ್ಲಾಕ್ಕೆ ವಲಸೆ ಹೋಗಿವೆ ಎಂದು ರಾಹುಲ್‌ಗಾಂಧಿ ಆರೋಪಿಸಿದರು.
 
ಕೋರಮಂಗಲದ ಗಾರ್ಮೆಂಟ್ಸ್‌ ಕಾರ್ಖಾನೆಗೆ ಭೇಟಿ ನೀಡಿ ಅಲ್ಲಿನ ಕಾರ್ಮಿಕರ ಜತೆ ಮಾತನಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ದೊಡ್ಡ ದೊಡ್ಡ ಕಾರ್ಖಾನೆ ಸ್ಥಾಪಿಸುವುದಕ್ಕಿಂತ ಚಿಕ್ಕ ಚಿಕ್ಕ ಉದ್ದಿಮೆ ಸ್ಥಾಪಿಸಿದರೆ ಉದ್ಯೋಗ ಸೃಷ್ಟಿಯಾಗಲಿದೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಅದಕ್ಕೆ ಒತ್ತು ನೀಡಲಿದೆ ಎಂದು ಹೇಳಿದರು.

ವಾಹನದ ಏಣಿಗೆ ಜೋತು ಬಿದ್ದ ಅಭ್ಯರ್ಥಿ: ಬಸವನಗುಡಿಯಲ್ಲಿ ಪೂಜೆ ಬಳಿಕ ದೇವಸ್ಥಾನದ ಹೊರಗೆ ಬಂದ ರಾಹುಲ್‌ ಗಾಂಧಿ, ಕಾರ್ಯಕರ್ತರತ್ತ ಕೈ ಬೀಸಿ, ಪ್ರಚಾರ ವಾಹನ ಏರಿದ ತಕ್ಷಣ ಭದ್ರತಾ ಸಿಬ್ಬಂದಿ ವಾಹನ ಬಾಗಿಲು ಮುಚ್ಚಿದರು. 

Advertisement

ದೇವಸ್ಥಾನದಿಂದ ಎರಡು ನಿಮಿಷ ತಡವಾಗಿ ಆಚೆ ಬಂದ ಕಾಂಗ್ರೆಸ್‌ ಅಭ್ಯರ್ಥಿ ಬೋರೇಗೌಡ, ಪ್ರಚಾರದ ವಾಹನ ಏರಲು ಪ್ರಯತ್ನಿಸಿದಾಗ ಸಾಧ್ಯವಾಗಲಿಲ್ಲ. ಈ ವೇಳೆ ಹಿಂಬದಿ ಏಣಿ ಹತ್ತಿದ ಬೋರೇಗೌಡ, ರಾಹುಲ್‌ ಗಾಂಧಿ ಭದ್ರತಾ ಸಿಬ್ಬಂದಿಗೆ ವಾಹನದ ಬಾಗಿಲು ತೆರೆಯುವಂತೆ ಕೇಳಿದರು. ಭದ್ರತೆ ಸಿಬ್ಬಂದಿ ಬಿಗಿಲು ತೆರೆಯಲು ನಿರಾಕರಿಸಿದರು.ಈ ಕ್ಷೇತ್ರದ ಅಭ್ಯರ್ಥಿ ಎಂದು ಕೇಳಿಕೊಂಡರೂ ಭದ್ರತಾ ಸಿಬ್ಬಂದಿಗೆ ಮಣೆ ಹಾಕಿಲ್ಲ. ದೇವಸ್ಥಾನದಿಂದ ಆಶ್ರಮ ವೃತ್ತದವರೆಗೂ ಬೋರೇಗೌಡ ಪ್ರಚಾರ ವಾಹನದ ಏಣಿಯಲ್ಲೇ ನಿಂತು ಕಾರ್ಯಕರ್ತರತ್ತ ಕೈ ಬೀಸಿದರು  

Advertisement

Udayavani is now on Telegram. Click here to join our channel and stay updated with the latest news.

Next