ಲಖಿಸರಾಯ್: ರಾಹುಲ್ ಗಾಂಧಿ ಅವರನ್ನು ಲಾಂಚ್ ಮಾಡಲು ಕಾಂಗ್ರೆಸ್ 20 ಬಾರಿ ವಿಫಲ ಪ್ರಯತ್ನ ನಡೆಸಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜನರು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಹುಲ್ ನಡುವೆ ಆಯ್ಕೆ ಮಾಡುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.
ಬಿಹಾರದ ಲಖಿಸರಾಯ್ ಜಿಲ್ಲೆಯಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿ, ಬಿಜೆಪಿಯ ಮಾಜಿ ಮಿತ್ರಪಕ್ಷ ಜೆಡಿಯುನ ನಾಯಕ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಭ್ರಷ್ಟ ಆರ್‌ಜೆಡಿಯೊಂದಿಗೆ ಕೈಜೋಡಿಸಿದ್ದಾರೆ, ಅವರು 2024 ರಲ್ಲಿ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರನ್ನು ಮೂರ್ಖರನ್ನಾಗಿ ಮಾಡಲಿದ್ದಾರೆ ಎಂದರು.
ಕಳೆದ ವಾರ ಪಾಟ್ನಾದಲ್ಲಿ ನಡೆದ ಪ್ರತಿಪಕ್ಷ ನಾಯಕರ ಸಭೆಯನ್ನು ಉಲ್ಲೇಖಿಸಿದ ಶಾ, “20 ಕ್ಕೂ ಹೆಚ್ಚು ಪಕ್ಷಗಳು ಒಗ್ಗೂಡಲು ಒಪ್ಪಿಕೊಂಡಿರುವುದು ನಿಜ. ಆದರೆ ಈ ಪಕ್ಷಗಳು ಒಟ್ಟಾಗಿ 20 ಲಕ್ಷ ಕೋಟಿ ರೂಪಾಯಿಗಳ ಹಗರಣಗಳಿಗೆ ಕಾರಣವಾಗಿವೆ ಎಂಬುದನ್ನು ಸಹ ಗಮನಿಸಬೇಕು” ಎಂದರು.
ಪಕ್ಷಗಳನ್ನು ಬದಲಾಯಿಸುವ ನಿತೀಶ್ ಕುಮಾರ್ ಅವರಂತಹ ವ್ಯಕ್ತಿಗೆ ಬಿಹಾರವನ್ನು ನಡೆಸುವ ಜವಾಬ್ದಾರಿಯನ್ನು ವಹಿಸಲಾಗುವುದಿಲ್ಲ. ಅವರು ಪ್ರಧಾನಿ ಹುದ್ದೆಯ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ. ಆದರೆ ವಾಸ್ತವವೆಂದರೆ ಅವರು ಪ್ರಧಾನಿಯಾಗುವುದಿಲ್ಲ. ಅವರು ಕೇವಲ ಲಾಲೂ ಜೀ ಅವರನ್ನು ಮೂರ್ಖರನ್ನಾಗಿ ಮಾಡಲಿದ್ದಾರೆ. ಎನ್‌ಡಿಎ ಬಿಹಾರದಲ್ಲಿ ಎಲ್ಲಾ 40 ಸ್ಥಾನಗಳನ್ನು ಗೆಲ್ಲಲಿದೆ ಎಂದು ಶಾ ಹೇಳಿದರು.
ಕೇಂದ್ರ ಸಚಿವರಾದ ಗಿರಿರಾಜ್ ಸಿಂಗ್, ನಿತ್ಯಾನಂದ ರಾಯ್,ಅಶ್ವಿನಿ ಚೌಬೆ ಸೇರಿದಂತೆ ಹಲವು ಹಿರಿಯ ಬಿಜೆಪಿ ನಾಯಕರು, ಮಾಜಿ ಉಪ ಮುಖ್ಯಮಂತ್ರಿ ಮತ್ತು ರಾಜ್ಯಸಭಾ ಸಂಸದ ಸುಶೀಲ್ ಕುಮಾರ್ ಮೋದಿ ಮತ್ತು ರಾಜ್ಯ ಘಟಕದ ಅಧ್ಯಕ್ಷ ಸಾಮ್ರಾಟ್ ಚೌಧರಿ ಕೂಡ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.