ಬೆಂಗಳೂರು: ಎಚ್‌ಎಎಲ್‌ಗೆ ರಫೇಲ್ ಯುದ್ಧ ವಿಮಾನ ತಯಾರಿಕೆಯ ಸಾಮರ್ಥ್ಯ ಇಲ್ಲ ಎನ್ನುವ ಮೂಲಕ ರಕ್ಷಣಾ
ಸಚಿವರು ಅಲ್ಲಿನ ನೌಕರರನ್ನು ಅವಮಾನ ಮಾಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಇಲ್ಲಿನ ಮಿನ್ಸ್ ಸ್ಕ್ವೇರ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಎಚ್‌ಎಎಲ್ ನಿವೃತ್ತ ಮತ್ತು ಹಾಲಿ ಸಿಬ್ಬಂದಿ ಜತೆಗಿನ ಸಂವಾದದ
ನಂತರ ಮಾತನಾಡಿದ ಅವರು, ಈ ಸಂಬಂಧ ನೌಕರರ ಬಳಿ ರಕ್ಷಣಾ ಸಚಿವರು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.
ಆದರೆ, ಅವರು ಕ್ಷಮೆ ಕೋರುವುದಿಲ್ಲ, ಹೀಗಾಗಿ ನಾನೇ ಕ್ಷಮೆ ಕೋರುತ್ತೇನೆ ಎಂದೂ ತಿರುಗೇಟು ನೀಡಿದ್ದಾರೆ. ಯುದಟಛಿ ವಿಮಾನ ವಿಚಾರದಲ್ಲಿ ಎಚ್‌ಎಎಲ್‌ಗೆ 78 ವರ್ಷಗಳ ಅನುಭವ ಇದೆ. ಆದರೆ, ರಕ್ಷಣಾ ಸಚಿವರು ಒಪ್ಪಂದ ಮಾಡಿಕೊಂಡಿರುವ ರಿಲಯನ್ಸ್ ಕಂಪನಿಗೆ ಯಾವ ಅನುಭವವಿದೆ ಎಂದಿರುವ ರಾಹುಲ್, ಈ ಬಗ್ಗೆ ಸಚಿವರೇಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ಗುತ್ತಿಗೆ ನೀಡಿರುವ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಸಂಸ್ಥೆ 45 ಸಾವಿರ ಕೋಟಿ ರೂ.
ಸಾಲದ ಹೊರೆಯಲ್ಲಿ ಸಿಲುಕಿದೆ. ಅನಿಲ್ ಅಂಬಾನಿಗೆ ನೀಡಿರುವ 30 ಸಾವಿರ ಕೋಟಿ ರೂ.ನ್ನು ಎಚ್‌ಎಎಲ್‌ಗೆ ನೀಡಿದ್ದರೆ ಇಲ್ಲಿನ ಉದ್ಯೋಗಿಗಳು ಜೀವನ ಕಟ್ಟಿಕೊಳ್ಳುತ್ತಿದ್ದರು ಎಂದೂ ಹೇಳಿದ್ದಾರೆ.
ಅಲ್ಲದೇ ಸಾರ್ವಜನಿಕ ಸ್ವಾಮ್ಯದ ಉದ್ಯಮಗಳು ಆಧುನಿಕ ದೇವಾಲಯಗಳು. ಆದರೆ, ಕೇಂದ್ರ ಸರ್ಕಾರ ಇಂತಹ ಉದ್ಯಮಗಳನ್ನು ಮುಳುಗಿಸಲು ಹೊರಟಿದೆ ಎಂದು ರಾಹುಲ್ ಆಕ್ರೋಶ ವ್ಯಕ್ತಪಡಿಸಿದರು. ಸಾರ್ವಜನಿಕ ಸ್ವಾಮ್ಯದ ಉದ್ಯಮಗಳ ರಕ್ಷಣೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಾರ್ವಜನಿಕ ಸ್ವಾಮ್ಯದ ಉದ್ಯಮಗಳ ರಕ್ಷಣೆ ಮಾಡಲಿದೆ ಎಂದರು.