Advertisement

ಕೈಗೆ ರಾಹುಲ್‌ ಟಾನಿಕ್‌; ಸಿದ್ದು ಬಗ್ಗೆ ಮೆಚ್ಚುಗೆ

07:43 AM Feb 14, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ 4 ದಿನಗಳ ಜನಾಶೀರ್ವಾದ ಯಾತ್ರೆಯು ಕಾಂಗ್ರೆಸಿಗರಲ್ಲಿ ಹೊಸ ಹುಮ್ಮಸ್ಸು ತುಂಬುವುದರ ಜತೆಗೆ ರಾಜ್ಯ ನಾಯಕರನ್ನು ಒಟ್ಟು ಗೂಡಿಸುವಲ್ಲಿಯೂ ಯಶಸ್ವಿಯಾಗಿದೆ. ಜತೆಗೆ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಕ್ತಿಯನ್ನೂ ಹೆಚ್ಚಿಸಿದೆ.

Advertisement

ರಾಹುಲ್‌ ಗಾಂಧಿ ಯಾತ್ರೆಯು ಕಾಂಗ್ರೆಸ್‌ ಪಾಲಿಗೆ “ಟಾನಿಕ್‌’ನಂತಾಗಿದ್ದು, ಜನಾಶೀರ್ವಾದ ಯಾತ್ರೆಯಲ್ಲಿ ದೊರೆತ ಸ್ಪಂದನೆಯಿಂದ ಖುದ್ದು ರಾಹುಲ್‌ ಗಾಂಧಿ ಸಹ ಸಂತಸಗೊಂಡಿದ್ದಾರೆ. ಸಿದ್ದರಾಮಯ್ಯ ಅವರನ್ನು ನೋಡಿ ಕಲಿಯಿರಿ ಎಂಬ ರಾಹುಲ್‌ ಗಾಂಧಿ ಮಾತು ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ಹಿಡಿತ ಮತ್ತಷ್ಟು ಗಟ್ಟಿಗೊಳಿಸಿದಂತಾಗಿದೆ.

ಯಾತ್ರೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌, ಲೋಕಸಭೆಯಲ್ಲಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್‌, ಕಾರ್ಯಾಧ್ಯಕ್ಷರಾದ ದಿನೇಶ್‌ ಗುಂಡೂರಾವ್‌, ಎಸ್‌.ಆರ್‌. ಪಾಟೀಲ್‌, ಮಾಜಿ ಸಚಿವ ಸತೀಶ್‌ ಜಾರಕಿಹೊಳಿ, ಹಿರಿಯ ನಾಯಕರಾದ ರೆಹಮಾನ್‌ಖಾನ್‌, ವೀರಪ್ಪ ಮೊಲಿ, ಆಸ್ಕರ್‌ ಫೆರ್ನಾಂಡಿಸ್‌, ಬಿ.ಕೆ.ಹರಿಪ್ರಸಾದ್‌, ಕೆ.ಎಚ್‌.ಮುನಿಯಪ್ಪ ಸಮನ್ವಯತೆ ಹಾಗೂ ಒಗ್ಗಟ್ಟು ಪ್ರದರ್ಶಿಸಿದ ಬಗ್ಗೆ ರಾಹುಲ್‌ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಎಲ್ಲ ಸಮುದಾಯಗಳ ನಾಯಕರು ಒಂದೊಂದು ಶಕ್ತಿಯಾಗಿದ್ದೀರಿ. ಯಾತ್ರೆಯಲ್ಲಿ ತೋರಿದ ಒಗ್ಗಟ್ಟು ಹಾಗೂ ಸಾಮೂಹಿಕ ಮುಂದಾಳತ್ವ ವಿಧಾನಸಭೆ ಚುನಾವಣೆ ಹೋರಾಟದಲ್ಲೂ ಮುಂದುವರಿಸಿದರೆ ರಾಜ್ಯದಲ್ಲಿ ಮತ್ತೂಮ್ಮೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಕಷ್ಟವೇನಲ್ಲ. ಆ ನಿಟ್ಟಿನಲ್ಲಿ ಶ್ರಮವಹಿಸಿ ಕೆಲಸ ಮಾಡಿ. ಇದೇ ಉತ್ಸಾಹ ಕಾಯ್ದುಕೊಳ್ಳಿ ಎಂದು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸರಕಾರ ಜಾರಿಗೊಳಿಸಿರುವ ಯೋಜನೆಗಳ ಬಗ್ಗೆಯೂ ರಾಹುಲ್‌ ಗಾಂಧಿ ಸಂಪೂರ್ಣ ಮಾಹಿತಿ ಪಡೆದು ಅದನ್ನು ಜನರಿಗೆ ತಿಳಿಸುವ ಕೆಲಸ ಪರಿಣಾಮಕಾರಿಯಾಗಿ ಆಗಬೇಕು. ಸಾಮಾಜಿಕ ಜಾಲತಾಣ, ಮಾಧ್ಯಮ, ಕಾಂಗ್ರೆಸ್‌ ನೆಟ್‌ವರ್ಕ್‌ ಎಲ್ಲವನ್ನೂ ಬಳಸಿಕೊಂಡು ಆ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದ್ದಾರೆ ಎಂದು ತಿಳಿದುಬಂದಿದೆ.

Advertisement

ಸಿಎಂ ಸಿದ್ದರಾಮಯ್ಯ ಅವರು ಕೈಗೊಂಡಿದ್ದ ಸಾಧನಾ ಸಂಭ್ರಮ ಯಾತ್ರೆಯ ವೀಡಿಯೋ ತುಣುಕುಗಳನ್ನು ವೀಕ್ಷಿಸಿದ್ದ ರಾಹುಲ್‌ ಗಾಂಧಿ, ಜನಾಶೀರ್ವಾದ ಯಾತ್ರೆಯಲ್ಲಿ ವಿಶೇಷವಾಗಿ ಶ್ರಮಿಕ ವರ್ಗ, ಯುವ ಸಮೂಹದ ಸ್ಪಂದನೆ ನೋಡಿ ಸಂತೋಷಗೊಂಡರು ಎಂದು ಹೇಳಲಾಗಿದೆ. 

ಯಾತ್ರೆಯ ಸಂದರ್ಭದಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ನಡೆಸಿದ ವಾಗ್ಧಾಳಿ ಹಾಗೂ ರಾಹುಲ್‌ಗಾಂಧಿ ಸಾಮಾನ್ಯರಂತೆ ಹಳ್ಳಿಗಳಲ್ಲಿ ಪೆಟ್ಟಿಗೆ ಅಂಗಡಿಯ ಆವರಣದಲ್ಲಿ ಕುಳಿತು ಬಜ್ಜಿ, ಬೋಂಡಾ, ಮಂಡಕ್ಕಿ, ಟೀ ಸವಿದದ್ದು ರಾಷ್ಟ್ರೀಯ ಮಟ್ಟದ ಸುದ್ದಿ ಹಾಗೂ ಚರ್ಚೆಗೆ ಗ್ರಾಸವಾಗಿದ್ದು ಯಾತ್ರೆಯ ವಿಶೇಷ. 

ರಾಜ್ಯದ ಮಟ್ಟಿಗೆ ಹೇಳುವುದಾದರೆ ಬಹುಚರ್ಚಿತ ನ್ಯಾ| ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಕೇಂದ್ರಕ್ಕೆ ಶಿಫಾರಸು ಕಳುಹಿಸಲು ರಾಜ್ಯ ಸರಕಾರಕ್ಕೆ ಸೂಚಿಸುವುದಾಗಿ ಭರವಸೆ ನೀಡುವ ಮೂಲಕ ದೊಡ್ಡ ಮತಬ್ಯಾಂಕ್‌ ಕಾಯ್ದಿಟ್ಟುಕೊಳ್ಳುವಲ್ಲಿಯೂ ಯಶಸ್ವಿಯಾಯಿತು. ಆದರೆ ಮಹಾದಾಯಿ ವಿಚಾರದಲ್ಲಿನ ಮೌನ ವಿಪಕ್ಷಗಳ ಟೀಕೆಗೆ ಒಳಗಾಯಿತು. ಆ ಭಾಗದ ಜನರಲ್ಲೂ ನಿರಾಸೆ ಮೂಡಿಸಿತು. 
 
ಫೆ.24ರಿಂದ ಮುಂಬಯಿ ಕರ್ನಾಟಕದಲ್ಲಿ  ಯಾತ್ರೆ
ಹೈದರಾಬಾದ್‌ ಕರ್ನಾಟಕ ಭಾಗದ ಬಳ್ಳಾರಿ, ರಾಯಚೂರು, ಕಲಬುರಗಿ, ಯಾದಗೀರ್‌ ಹಾಗೂ ಬೀದರ್‌ ಭಾಗದಲ್ಲಿ  ನಾಲ್ಕು ದಿನ ಪ್ರವಾಸ ಕೈಗೊಂಡು ರಾಜ್ಯ ವಿಧಾನಸಭೆ ಚುನಾವಣೆಗೆ ಅಧಿಕೃತವಾಗಿ ಚಾಲನೆ ಕೊಟ್ಟು ಹೋಗಿರುವ ರಾಹುಲ್‌ ಗಾಂಧಿ, ಎರಡನೇ ಸುತ್ತಿನಲ್ಲಿ ಫೆ.24, 25, 26ರಂದು ಮುಂಬಯಿ ಕರ್ನಾಟಕ ಭಾಗದಲ್ಲಿ  ಪ್ರವಾಸ ಕೈಗೊಳ್ಳಲಿದ್ದಾರೆ. 

ಎಸ್‌.ಲಕ್ಷ್ಮೀನಾರಾಯಣ 

Advertisement

Udayavani is now on Telegram. Click here to join our channel and stay updated with the latest news.

Next