ಬೆಂಗಳೂರು: ರಫೇಲ್ ಯುದಟಛಿ ವಿಮಾನ ಖರೀದಿ ಒಪ್ಪಂದ ಸಂಬಂಧ ಎಚ್‌ಎಎಲ್ ನಿವೃತ್ತ ಉದ್ಯೋಗಿಗಳೊಂದಿಗೆ ಸಂವಾದ ನಡೆಸಲು ಆಗಮಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜತೆ ಮಹತ್ವದ ಸಮಾಲೋಚನೆ ನಡೆಸಿದರು.
ಸಮ್ಮಿಶ್ರ ಸರ್ಕಾರ ಕಳೆದ ಐದು ತಿಂಗಳಲ್ಲಿ ಕೈಗೊಂಡ ತೀರ್ಮಾನ, ಸಂಪುಟ ವಿಸ್ತರಣೆಯಾಗದ ಹಿನ್ನೆಲೆಯಲ್ಲಿ ಉಂಟಾಗಿರುವ ಅಸಮಾಧಾನ, ಬಿಜೆಪಿಯ ಆಪರೇಷನ್ ಕಮಲ ಕಾರ್ಯಾಚರಣೆ ಮತ್ತಿತರ ವಿದ್ಯಮಾನಗಳ ಬಗ್ಗೆ ಕುಮಾರಸ್ವಾಮಿ ಮಾಹಿತಿ ನೀಡಿದರು.ಬಿಎಸ್‌ಪಿ ಸಚಿವ ಎನ್.ಮಹೇಶ್ ರಾಜೀನಾಮೆ ವಿಷಯವೂ ಮಾತುಕತೆ ಸಂದರ್ಭದಲ್ಲಿ ಪ್ರಸ್ತಾಪವಾಯಿತು ಎಂದು ತಿಳಿದು ಬಂದಿದೆ.
ಉಪ ಚುನಾವಣೆಯಲ್ಲಿ ಐದು ಕ್ಷೇತ್ರಗಳನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಗೆಲ್ಲುವ ಅನಿವಾರ್ಯತೆ ಬಗ್ಗೆಯೂ ರಾಹುಲ್ ಕುಮಾರಸ್ವಾಮಿಗೆಮನವರಿಕೆ ಮಾಡಿಕೊಟ್ಟು, ಒಟ್ಟಾಗಿ ಪ್ರಚಾರ ಮಾಡಿ ಬಿಜೆಪಿ ವಿರುದ್ಧ ಹೋರಾಟ ಮಾಡಿ, ಐದೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಸಂದೇಶ ರವಾನೆಯಾಗುವಂತೆ ಮಾಡಿ ಎಂದು ಹೇಳಿದರು ಎನ್ನಲಾಗಿದೆ.
ನಂತರ ರಾಜ್ಯ ಉಸ್ತುವಾರಿ ಕೆ.ಸಿ.ವೇಣು ಗೋಪಾಲ್, ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್,ಸಚಿವ ಡಿ.ಕೆ.ಶಿವಕುಮಾರ್ ಅವರು ರಾಹುಲ್ ಗಾಂಧಿ ಜತೆ ಮಾತನಾಡಿ ಉಪ ಚುನಾವಣೆಯಲ್ಲಿ ಬಳ್ಳಾರಿ ಹಾಗೂ ಶಿವಮೊಗ್ಗ ಕ್ಷೇತ್ರಗಳ ಸ್ಥಿತಿಗತಿ ವಿವರಿಸಿದರು. ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ಬಗ್ಗೆಯೂ ಚರ್ಚಿಸಿದರು. ಉಪ ಚುನಾವಣೆ ನಂತರ ಸಂಪುಟ ವಿಸ್ತರಣೆಗೆ ರಾಹುಲ್‌ಗಾಂಧಿ ಸೂಚನೆ ನೀಡಿದರು ಎಂದು ಹೇಳಲಾಗಿದೆ.