Advertisement

ರಾಹುಲ್‌ ಎಸ್‌ಪಿಜಿ ಭದ್ರತಾ ಸಿಬ್ಬಂದಿ ಕಿರಿಕಿರಿ

03:17 PM Feb 25, 2018 | |

ವಿಜಯಪುರ: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ವಿಜಯಪುರ ಜಿಲ್ಲೆಯ ಎರಡು ದಿನಗಳ ಪ್ರವಾಸದ ಮೊದಲ ದಿನವೇ ಎಸ್‌ಪಿಜಿ ಭದ್ರತಾ ಸಿಬ್ಬಂದಿಯ ಕಟ್ಟುನಿಟ್ಟಿನ ನಿಯಮದಿಂದಾಗಿ ಹಲವು ರೀತಿಯಲ್ಲಿ ಕಿರಿ ಕಿರಿ ಅನುಭವಿಸಿದರು.

Advertisement

ಶನಿವಾರ ತಿಕೋಟಾದಲ್ಲಿ ರಾಹುಲ್‌ ಗಾಂಧಿ ಅವರು ಸ್ತ್ರೀಶಕ್ತಿ ಸಮಾವೇಶದಲ್ಲಿ ಮಹಿಳೆಯರನ್ನು ಉದ್ದೇಶಿಸಿ ಭಾಷಣ ಮಾಡುವ ಕಾರ್ಯಕ್ರಮವಿತ್ತು, ಇದಕ್ಕಾಗಿ ಸುಮಾರು 70 ಸಾವಿರ ಮಹಿಳೆಯರನ್ನು ಕರೆತರಲಾಗಿತ್ತು.

ರಾಹುಲ್‌ ಅವರಿಗೆ ಝಡ್‌ ಭದ್ರತೆ ಇರುವ ಕಾರಣ ಅವರ ಭದ್ರತೆಗೆ ನಿಯೋಜಿತ ಎಸ್‌ಪಿಜಿ ಸಿಬ್ಬಂದಿ ಭಾರಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಕಾರ್ಯಕ್ರಮಕ್ಕೆ ಬೆಂಕಿ ಪೊಟ್ಟಣ, ಸಿಗರೇಟು, ತಂಬಾಕು ಹೀಗೆ ಹಲವು ವಸ್ತುಗಳನ್ನು ನಿಷೇಧಿಸಿದ್ದರು. ಅಲ್ಲದೇ ಬಾಟಲಿ ನೀರನ್ನೂ ಕೊಂಡೊಯ್ಯಲು ನಿರ್ಬಂಧಿಸಿದ್ದರು. ಹೆಜ್ಜೆ ಹೆಜ್ಜೆಗೂ ಸ್ಥಳೀಯ ಪೊಲೀಸರ ತಕರಾರುಗಳೂ ಇದ್ದವು.

ಹೀಗಾಗಿ ಬೆಳಗ್ಗೆಯಿಂದಲೇ ರಾಹುಲ್‌ಗಾಂಧಿ ಆಗಮಕ್ಕೆ ಕಾದು ಕುಳಿತಿದ್ದ ಜನರು ಕುಡಿಯಲು ನೀರೂ ಇಲ್ಲದೇ ಪರದಾಡಿದರು. ವೇದಿಕೆ ಪಕ್ಕದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರಿಗಾಗಿ ಊಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರೂ ವೇದಿಕೆಗೆ ಆವರಣಕ್ಕೆ ನೀರು ತರಲು ನಿರ್ಬಂಧಿಸಿದ್ದರು.

ಇದರಿಂದಾಗಿ ಮಕ್ಕಳು, ವೃದ್ಧರೊಂದಿಗೆ ಆಗಮಿಸಿದ್ದ ಮಹಿಳೆಯರು ಬಿಸಿಲಿನ ಧಗೆ ತಣಿಸಿಕೊಳ್ಳಲು ಕುಡಿಯುವ ನೀರೂ ಸಿಗದೇ ಪರದಾಡಿದರು. ಕೆಲವರು ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಪ್ರಾಯೋಗಿಕ ಪರೀಕ್ಷೆಗಾಗಿ ಗಂಗಾ ಪೂಜೆಗೆ ತಂದಿದ್ದ ಕುಂಭಗಳ ನೀರನ್ನೇ ಕುಡಿದು ಕೆಲವರು ದಾಹ ನೀಗಿಕೊಂಡರು.

Advertisement

ರಾಹುಲ್‌ ಕಾರ್ಯಕ್ರಮಕ್ಕಾಗಿ ಭಾರಿ ಪ್ರಮಾಣದಲ್ಲಿ ವಾಹನಗಳು ಆಗಮಿಸಿದ್ದವು. ಅದರಲ್ಲೂ ಸಂಘಟಕರು ಸಮಾವೇಶಕ್ಕೆ ಮಹಿಳೆಯರನ್ನು ಕರೆ ತರಲು ಬಸ್‌ ವ್ಯವಸ್ಥೆ ಮಾಡಿದ್ದರು. ದ್ವಿಚಕ್ರ, ಲಘು ಹಾಗೂ ಭಾರಿ ವಾಹನಗಳ ನಿಲುಗಡೆ ಪ್ರತ್ಯೇಕ ವ್ಯವಸ್ಥೆ ಮಾಡಿದ್ದರು. ಆದರೆ ತಿಕೋಟಾ ಬಳಿಕ ರಾಹುಲ್‌ ಅವರು ವಿಜಯಪುರವರೆಗೆ ಸುಮಾರು 25 ಕಿ.ಮೀ. ರಸ್ತೆ ಮಾರ್ಗದ ಸಂಚಾರ ಹಾಗೂ ರೋಡ್‌ ಶೋ ಹಮ್ಮಿಕೊಂಡಿದ್ದರು. ಇದರಿಂದ ಈ ಮಾರ್ಗದ ರಸ್ತೆಗಳಲ್ಲಿ ಎಲ್ಲೆಲ್ಲೂ ಟ್ರಾಫಿಕ್‌ ಜಾಮ್‌ನಿಂದಾಗಿ ಕಿ.ಮೀ. ವರೆಗೆ ಇಕ್ಕೆಲಗಳಲ್ಲಿ ಬಸ್‌ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿತ್ತು. ಇನ್ನು ವಿಜಯಪುರ ನಗರದಲ್ಲಿ ರೋಡ್‌ ಶೋ ಇದ್ದ ಕಾರಣ ರಾಹುಲ್‌ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿರುವ ಸರ್ಕಾರಿ ಪ್ರವಾಸಿ ಮಂದಿರದಿಂದ ಮಹಾತ್ಮ ಗಾಂಧಿಧೀಜಿ ವೃತ್ತದವರೆಗೆ ಹಾಗೂ ಅಲ್ಲಿಂದ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದವರೆಗೆ ಬಹುತೇಕ ರಸ್ತೆ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಿದ್ದರು. ಇದರಿಂದಾಗಿ ಸಾರ್ವಜನಿಕರು
ಪರದಾಡುವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next