ಇತ್ತ ಲೋಕಸಭೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನದ ಮೇಲೆ ಗುಜರಾತ್‌ನಲ್ಲಿ ನಡೆದ ಕಲ್ಲುತೂರಾಟ ಪ್ರಸ್ತಾಪಗೊಂಡಿದ್ದು, ಕಾಂಗ್ರೆಸ್ ತೀವ್ರ ಪ್ರತಿಭಟನೆ ನಡೆಸಿದೆ. ಪ್ರಕರಣವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, “ರಾಹುಲ್ ಅವರ ಕೊಲೆ ನಡೆಸಲೆಂದೇ ಕಲ್ಲುತೂರಾಟ ನಡೆಸಲಾಗಿದೆ’ ಎಂದು ಆರೋಪಿಸಿದರು. ಆದರೆ ಕಾಂಗ್ರೆಸ್ ಆರೋಪಕ್ಕೆ ಕೇಂದ್ರ ಸರಕಾರ ಪ್ರತ್ಯಾರೋಪ ಮಾಡಿದ್ದು, ಗದ್ದಲಕ್ಕೆ ಕಾರಣವಾಯಿತು. ಖರ್ಗೆಗೆ ಪ್ರತಿಕ್ರಿಯಿಸಿದ ಗೃಹಸಚಿವ ರಾಜನಾಥ್ ಸಿಂಗ್, ರಾಹುಲ್ ಅವರು ಎಸ್‌ಪಿಜಿ ಭದ್ರತೆ ನಿಯಮಾವಳಿ ಗಳನ್ನು ನೂರಾರು ಬಾರಿ ಉಲ್ಲಂ ಸಿದ್ದಾರೆ ಎಂದು ಆರೋಪಿಸಿದ್ದಾರೆ. ವಿದೇಶಕ್ಕೆ ತೆರಳಿದಾಗ ಇದುವರೆಗೆ ಅವರು ಭದ್ರತೆ ಪಡೆದುಕೊಂಡಿಲ್ಲವೇಕೆ ಎಂದು ಪ್ರಶ್ನಿಸಿದರು. ಈ ವೇಳೆ ಸರಕಾರ ದಿಕ್ಕುತಪ್ಪಿಸುತ್ತಿದೆ ಎಂದು ಖರ್ಗೆ ಆರೋಪಿಸಿದ್ದು, ಸಚಿವ ಅನಂತ್ ಕುಮಾರ್ ಅವರನ್ನು ಕೆರಳಿಸಿತು.ದಿಕ್ಕು ತಪ್ಪಿಸುತ್ತಿರುವುದು ಕಾಂಗ್ರೆಸ್. ರಾಹುಲ್ ಅವರಿಗೆ ಭದ್ರತೆ ಬೇಡವೆಂದರೆ, ಮತ್ತೆ ಎಸ್‌ಪಿಜಿಯನ್ನು ಇಟ್ಟುಕೊಳ್ಳುವುದೇಕೆ ಎಂದು ಮರುಪ್ರಶ್ನೆ ಎಸೆದರು. ಈ ವೇಳೆ ವಿಪರೀತ ಗದ್ದಲವಾದ್ದರಿಂದ ದಿನದ ಮಟ್ಟಿಗೆ ಸದನವನ್ನು ಮುಂದೂಡಬೇಕಾಯಿತು.