ಹೊಸದಿಲ್ಲಿ: ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್, ಪೇಸ್ ಬೌಲರ್ ಶಾದೂìಲ್ ಠಾಕೂರ್ ಮತ್ತು ಆರಂಭಕಾರ ಶಿಖರ್ ಧವನ್ ಅವರನ್ನು ಮರಳಿ ಏಕದಿನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧ ನಡೆಯುವ 3 ಪಂದ್ಯಗಳ ಸರಣಿಗಾಗಿ ಶನಿವಾರ ಪ್ರಕಟಿಸಲಾದ ತಂಡದಲ್ಲಿ ಈ ಮೂವರು ಸ್ಥಾನ ಪಡೆದಿದ್ದಾರೆ.
ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿಯ ವೇಳೆ ತಂಡದಲ್ಲಿದ್ದೂ ಅವಕಾಶ ಪಡೆದ ಕರ್ನಾಟಕದ ಕೆ.ಎಲ್. ರಾಹುಲ್, ಬೌಲರ್‌ಗಳಾದ ಮೊಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ಅವರನ್ನು ಈ ಸರಣಿಯಿಂದ ಹೊರಗಿರಿಸಲಾಗಿದೆ.
ಅನುಭವಿ ಸ್ಪಿನ್ನರ್‌ಗಳಾದ ಆರ್. ಅಶ್ವಿನ್ ಹಾಗೂ ರವೀಂದ್ರ ಜಡೇಜ ಮತ್ತೆ ಆಯ್ಕೆಗಾರರ ಕೃಪಾಕಟಾಕ್ಷ ಸಂಪಾದಿಸುವಲ್ಲಿ ವಿಫಲರಾಗಿದ್ದಾರೆ. ಇವರ ಸ್ಥಾನದಲ್ಲಿ ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್ ಮತ್ತು ಅಕ್ಷರ್ ಪಟೇಲ್ ಸ್ಪಿನ್ ವಿಭಾಗವನ್ನು ನೋಡಿಕೊಳ್ಳುವರು. ಅಶ್ವಿನ್ ಮತ್ತು ಜಡೇಜ ಸದ್ಯ ರಣಜಿ ಪಂದ್ಯಗಳನ್ನಾಡುತ್ತಿದ್ದಾರೆ.
ಶಿಖರ್ ಧವನ್ ಆಸ್ಟ್ರೇಲಿಯ ವಿರುದ್ಧದ ಸರಣಿಗೆ ಆಯ್ಕೆಯಾದ ಬಳಿಕ ಹಿಂದೆ ಸರಿದಿದ್ದರು. ಪತ್ನಿಯ ಅನಾರೋಗ್ಯದಿಂದ ಮೊದಲ 3 ಪಂದ್ಯಗಳಿಂದ ಹೊರಗುಳಿಯಲು ನಿರ್ಧರಿಸಿದ್ದರು. ಆದರೆ ಅನಂತರದ 2 ಪಂದ್ಯಗಳಿಂದಲೂ ಅವರನ್ನು ದೂರ ಇರಿಸಲಾಗಿತ್ತು. ಬಳಿಕ ಆಸೀಸ್ ಎದುರಿನ ಟಿ20 ಪಂದ್ಯಗಳನ್ನಾಡಿದ್ದರು. ಈಗ ಏಕದಿನಕ್ಕೆ ಮರಳಿದ್ದಾರೆ. ಧವನ್ ಗೈರಲ್ಲಿ ಇನ್ನಿಂಗ್ಸ್ ಆರಂಭಿಸಿದ ಅಜಿಂಕ್ಯ ರಹಾನೆ ಕೂಡ ತಂಡದಲ್ಲಿ ಮುಂದುವರಿದಿದ್ದಾರೆ.
32ರ ಹರೆಯದ ದಿನೇಶ್ ಕಾರ್ತಿಕ್ ಕಳೆದ ವೆಸ್ಟ್ ಇಂಡೀಸ್ ಪ್ರವಾಸ ಹಾಗೂ ಅನಂತರದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕೂಟದ ವೇಳೆ ಭಾರತ ತಂಡದಲ್ಲಿದ್ದರು. ಮೊನ್ನೆ ಆಸ್ಟ್ರೇಲಿಯ ಎದುರಿನ ಟಿ20 ಸರಣಿಗೆ ಆಯ್ಕೆಯಾದರೂ ಆಡುವ ಅವಕಾಶ ಲಭಿಸಿರಲಿಲ್ಲ.
ಶ್ರೀಲಂಕಾ ಪ್ರವಾಸದ ವೇಳೆ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದ ಶಾದೂìಲ್ ಠಾಕೂರ್ ಅವರನ್ನು ಆಸ್ಟ್ರೇಲಿಯ ಎದುರಿನ ಸರಣಿಯಿಂದ ಹೊರಗಿಡಲಾಗಿತ್ತು. ಈಗ ಮತ್ತೆ ಏಕದಿನ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬುಮ್ರಾ ವೇಗದ ಬೌಲಿಂಗ್ ವಿಭಾಗದ ಪ್ರಮುಖ ಸದಸ್ಯರು.
ಸರಣಿಯ ಮೊದಲ ಪಂದ್ಯ ಅ. 22ರಂದು ಮುಂಬಯಿಯಲ್ಲಿ ನಡೆಯಲಿದೆ.
ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ (ಉಪನಾಯಕ), ಶಿಖರ್ ಧವನ್, ಅಜಿಂಕ್ಯ ರಹಾನೆ, ಮನೀಷ್ ಪಾಂಡೆ, ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ಮಹೇಂದ್ರ ಸಿಂಗ್ ಧೋನಿ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಶಾದೂìಲ್ ಠಾಕೂರ್.