Advertisement

“ನ್ಯಾಯ’ಹಸ್ತ ವಾಗ್ಧಾನ

01:11 AM Apr 03, 2019 | sudhir |

ಹೊಸದಿಲ್ಲಿ: ದೇಶದ ಐದು ಕೋಟಿ ಕಡುಬಡವರಿಗೆ ವಾರ್ಷಿಕ 72,000 ರೂ. ವರಮಾನದ ಖಾತರಿ, ರೈತರಿಗೆ ಸಾಲ ಮನ್ನಾ, ಸಾಲ ಮುಕ್ತಿ ಯೋಜನೆ, ಪ್ರತ್ಯೇಕ ಬಜೆಟ್‌ ಮಂಡನೆ, 2020ರೊಳಗೆ 24 ಲಕ್ಷ ಸರಕಾರಿ ನೌಕರಿಗಳ ಭರ್ತಿ ಮತ್ತು ಒಂದೇ ಸ್ಲಾ éಬ್‌ನಡಿ ಜಿಎಸ್‌ಟಿ…

Advertisement

ಇವುಗಳೆಲ್ಲ ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್‌ ಮಂಗಳವಾರ ಬಿಡುಗಡೆ ಮಾಡಿರುವ “ಹಮ್‌ ನಿಭಾಯೇಂಗೆ’ (ನಾವು ಈಡೇರಿಸುತ್ತೇವೆ) ಎಂಬ ಹೆಸರಿನ ಪ್ರಣಾಳಿಕೆಯ ಪ್ರಮುಖ ಅಂಶಗಳು.

ದಿಲ್ಲಿಯಲ್ಲಿರುವ ಕಾಂಗ್ರೆಸ್‌ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಹಿರಿಯ ನಾಯಕರಾದ ಪಿ. ಚಿದಂಬರಂ, ಎ.ಕೆ.ಆ್ಯಂಟನಿ ಅವರ ಉಪಸ್ಥಿತಿಯಲ್ಲಿ 53 ಪುಟ ಗಳ ಪ್ರಣಾಳಿಕೆ ಬಿಡುಗಡೆ ಮಾಡಿದರು.

“ನಮ್ಮ ಪ್ರಣಾಳಿಕೆ ಜನರ ಆಶಯ ಗಳ ಪ್ರತೀಕವಾಗಿದೆ. ಎಲ್ಲರ ಆಶಯಗಳನ್ನು ಬಿಂಬಿಸುತ್ತದೆ. ಯಾವುದೋ ಓರ್ವ ವ್ಯಕ್ತಿಯ “ಮನ್‌ ಕೀ ಬಾತ್‌’ನ ಅಂಶಗಳಂತೆ ಇಲ್ಲ’ ಎಂದು ಈ ಸಂದರ್ಭ ಮಾತನಾಡಿದ ರಾಹುಲ್‌ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕೆ ಮಾಡಿದರು. ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಬಿಜೆಪಿ ಆಡಳಿತವಿರುವ ಐದು ರಾಜ್ಯಗಳಲ್ಲಿ ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಲಾಗಿದೆ. ನಾವು ಜನರನ್ನು ಒಗ್ಗೂಡಿಸುತ್ತೇವೆ ಎಂದರು.

ಅಧಿಕಾರಕ್ಕೆ ಬಂದರೆ ಮೊದಲ ಅಧಿವೇಶನದಲ್ಲಿಯೇ ಮಹಿಳಾ ಮೀಸಲಾತಿಯನ್ನು ಮಂಡಿ ಸುವುದಾಗಿ ರಾಹುಲ್‌ ಗಾಂಧಿ ಅವರು ತಿಳಿಸಿದರು.

Advertisement

ಅಪಾಯಕಾರಿ ಪ್ರಣಾಳಿಕೆ ಎಂದ ಬಿಜೆಪಿ
ಕಾಂಗ್ರೆಸ್‌ ಪ್ರಣಾಳಿಕೆ ದೇಶದ ಸುರಕ್ಷತೆಯ ವಿಚಾರದ ಮಟ್ಟಿಗೆ ಅಪಾಯಕಾರಿ ಪ್ರಣಾಳಿಕೆ ಎಂದು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟಿÉ ಟೀಕಿಸಿದರು. ಇದು ದೇಶವನ್ನು ಒಡೆದು ಚೂರು ಮಾಡುವ ಅಜೆಂಡಾವನ್ನು ಹೊಂದಿದೆ ಎಂದರು.

ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆಯಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಎಫ್ಎಸ್‌ಪಿ ಕಾಯ್ದೆಯ ಪುನರ್‌ ಪರಿಶೀಲನೆ ಮಾಡುವುದಾಗಿ ಕಾಂಗ್ರೆಸ್‌ ಪ್ರಸ್ತಾವಿಸಿದೆ. ಇದು ನಿಜಕ್ಕೂ ಅಪಾಯಕಾರಿ ವಿಚಾರ. ರಾಹುಲ್‌ ಮತ್ತು ಅವರ “ತುಕಡೇ-ತುಕಡೇ’ (ತುಂಡು ಮಾಡುವವರು) ಗ್ಯಾಂಗ್‌ ದೇಶವನ್ನು ಒಡೆದು ಚೂರು ಮಾಡುತ್ತದೆ. ಪ್ರಣಾಳಿಕೆಯಲ್ಲಿ ರಾಷ್ಟ್ರೀಯ ಸುರಕ್ಷತೆಗೆ ಧಕ್ಕೆ ತರುವಂಥ ಅಂಶಗಳಿವೆ ಎಂದರು. ಕಾಂಗ್ರೆಸ್‌, ಜೆಹಾದಿಗಳ ಹಾಗೂ ಮಾವೋವಾದಿಗಳ ಹಿಡಿತದಲ್ಲಿದೆ. ಕಾಂಗ್ರೆಸ್‌ ಯಾವತ್ತೂ ಅವರ ಹಿತಾಸಕ್ತಿ ಕಾಪಾಡುತ್ತದೆ. ಉಗ್ರವಾದಿಗಳು ದೇಶದೊಳಕ್ಕೆ ಕಾಲಿಡಲು ಅವಕಾಶ ಮಾಡಿಕೊಡುತ್ತದೆ ಎಂದರು.

ಕಾಂಗ್ರೆಸ್‌ ವೆಬ್‌ಸೈಟ್‌ ಕ್ರ್ಯಾಶ್‌!
ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಬಿಡುಗಡೆಯಾದ ಕೆಲವೇ ನಿಮಿಷ ಗಳಲ್ಲಿ ಪ್ರಣಾಳಿಕೆಯಿದ್ದ ಕಾಂಗ್ರೆಸ್‌ ವೆಬ್‌ಸೈಟ್‌ ಕ್ರ್ಯಾಶ್‌ ಆಗಿದೆ. ಅಪರಾಹ್ನ 1.16ಕ್ಕೆ ಟ್ವಿಟರ್‌ನಲ್ಲಿ ಇದನ್ನು ಪ್ರಕಟಿಸಿದ ಪಕ್ಷ, ವೆಬ್‌ಸೈಟ್‌ಗೆ ಭೇಟಿ ನೀಡುವವರ ಸಂಖ್ಯೆ ಅಧಿಕವಾಗಿದ್ದರಿಂದ ಸದ್ಯಕ್ಕೆ ವೆಬ್‌ಸೈಟ್‌ ಕ್ರ್ಯಾಶ್‌ ಆಗಿದೆ. ಬೇಗನೆ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದರು.

ಪ್ರಣಾಳಿಕೆ ಪ್ರಮುಖಾಂಶ
1 ಕನಿಷ್ಠ ಆದಾಯ ಖಾತ್ರಿ
ನ್ಯೂನತಮ್‌ ಆಯ್‌ ಯೋಜನಾ (ನ್ಯಾಯ್‌) ಮೂಲಕ ದೇಶದ ಐದು ಕೋಟಿ ಕಡುಬಡವರಿಗೆ ವಾರ್ಷಿಕ 72,000 ರೂ.ಗಳ ಆದಾಯ ನೀಡುವ ಗುರಿ. ಈ ಕುಟುಂಬಗಳ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಮಹಿಳೆಯರ ಖಾತೆಗೆ ಹಣ ವರ್ಗಾವಣೆ.

2 ಯುವ ಭಾರತ: ನಿರುದ್ಯೋಗ ನಿವಾರಣೆ
2020ರೊಳಗೆ ಕೇಂದ್ರ ಸರಕಾರದಡಿ ಖಾಲಿ ಇರುವ 4 ಲಕ್ಷ ಮತ್ತು ರಾಜ್ಯ ಸರಕಾರಗಳಲ್ಲಿ ಖಾಲಿ ಇರುವ 20 ಲಕ್ಷ ಉದ್ಯೋಗಗಳ ಭರ್ತಿ. ಗ್ರಾಮ ಪಂಚಾಯತ್‌ ವ್ಯಾಪ್ತಿ ಗಳಲ್ಲಿ ಒಟ್ಟು 10 ಲಕ್ಷ “ಸೇವಾ ಮಿತ್ರ’ ಉದ್ಯೋಗ ಸೃಷ್ಟಿ.

3 ಕೃಷಿ ವಲಯ
ರೈತರಿಗೆ ಸಾಲ ಮನ್ನಾ ಕೊಡುಗೆಯ ಜತೆಗೆ ಸಾಲ ಮುಕ್ತಿ ಕೊಡುಗೆ ನೀಡಲು ನಿರ್ಧಾರ. ಜತೆಗೆ ರೈತರಿಗಾಗಿ ಪ್ರತಿ ವರ್ಷ ಪ್ರತ್ಯೇಕ ಬಜೆಟ್‌. ಕೃಷಿ ಕ್ಷೇತ್ರದ ಅಭಿವೃದ್ಧಿ ಮತ್ತು ಯೋಜನೆಗಳಿಗೆ ಪ್ರತ್ಯೇಕ ಆಯೋಗ ರಚನೆ.

4 ಕಾನೂನಿನಲ್ಲಿ ಬದಲಾವಣೆ
ವಿವಾದಿತ ಸಶಸ್ತ್ರಪಡೆಗಳ ವಿಶೇಷ ಅಧಿಕಾರ ಕಾಯ್ದೆ (ಎಎಫ್ಎಸ್‌ಪಿಎ) ಮರುಪರಿಶೀಲನೆಗೆ ಕ್ರಮ. ಬ್ರಿಟಿಷರ ಕಾಲದ ಐಪಿಸಿ ಸೆಕ್ಷನ್‌ 124 (ದೇಶದ್ರೋಹ) ರದ್ದತಿಗೆ ಕ್ರಮ. ಮಾನಹಾನಿ ಪ್ರಕರಣ ಸಿವಿಲ್‌ ಆಗಿ ಪರಿವರ್ತಿಸುವುದು.

5 ಜಿಎಸ್‌ಟಿ 2.0
ಜಿಎಸ್‌ಟಿ ಎರಡನೇ ಆವೃತ್ತಿಯ ನಿಯಮಗಳಲ್ಲಿ ಸುಧಾರಣೆ. ಈಗಿರುವ 4 ಸ್ಲಾéಬ್‌ಗಳ ಜಿಎಸ್‌ಟಿ ಬದಲಿಗೆ ಒಂದೇ ಸ್ಲಾéಬ್‌ನಲ್ಲಿ ಜಿಎಸ್‌ಟಿ ದರ. ಜಿಎಸ್‌ಟಿ ಲಾಭಾಂಶ ಗ್ರಾ.ಪಂ.ಗಳಿಗೂ ಹಂಚುವ ನಿರ್ಧಾರ.

6 ಆರೋಗ್ಯ
ಜಿಡಿಪಿಯ ಆಂಶಿಕ ಭಾಗವನ್ನು, ಸರಕಾರಿ ಆಸ್ಪತ್ರೆಗಳ ಮೇಲ್ದರ್ಜೆಗಾಗಿ ಹಾಗೂ ಬಡವರಿಗೆ ಉನ್ನತ ದರ್ಜೆಯ ವೈದ್ಯಕೀಯ ಸೌಲಭ್ಯಗಳು ಸಿಗುವಂತೆ ಮಾಡಲು ಬಳಕೆ. ಆರೋಗ್ಯದ ಹಕ್ಕು ಕಾಯ್ದೆ ಅಡಿಯಲ್ಲಿ “ಯೂನಿವರ್ಸಲ್‌ ಹೆಲ್ತ್‌ ಕಾರ್ಡ್‌’ ಮೂಲಕ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಸೇವೆ.

7 ರಕ್ಷಣಾ ಇಲಾಖೆಗೆ ಕಾಯಕಲ್ಪ
ರಕ್ಷಣೆಗಾಗಿ ವ್ಯಯಿಸಲಾಗುತ್ತಿರುವ ಹಣದಲ್ಲಿ ಹೆಚ್ಚಳ. ಪಾರದರ್ಶಕ ಮಾರ್ಗಗಳಲ್ಲಿ ಸೇನೆಗೆ ಆಧುನಿಕ ಸ್ಪರ್ಶ. ಅರೆಸೇನಾ ಸಿಬಂದಿ ಮತ್ತು ಅವರ ಕುಟುಂಬಗಳಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ಸೌಲಭ್ಯಗಳು.

8 ಶಿಕ್ಷಣ
ಪಬ್ಲಿಕ್‌ ಶಾಲೆಗಳಲ್ಲಿ 1ರಿಂದ 12ನೇ ತರಗತಿಯವರೆಗೆ ಕಡ್ಡಾಯ ಶಿಕ್ಷಣ. ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಶೇ. 6ರಷ್ಟನ್ನು ಶಿಕ್ಷಣಕ್ಕೆ ಬಳಸಲು ನಿರ್ಧಾರ.

9 ದ್ವೇಷ ಆಧಾರಿತ ಅಪರಾಧಗಳ ತಡೆ
ಹಲವು ರಾಜ್ಯಗಳಲ್ಲಿ ಹರಡಿರುವ ದ್ವೇಷ ಆಧಾರಿತ ಅಪರಾಧಗಳ ನಿಯಂತ್ರಣಕ್ಕೆ ಕ್ರಮ. ದಂಗೆ, ಗಲಭೆಯಂಥ ಪ್ರಕರಣಗಳಲ್ಲಿ ಭದ್ರತಾ ಪಡೆಗಳ ಉದ್ದೇಶಪೂರ್ವಕ ನಿರ್ಲಕ್ಷ್ಯದಂಥ ಸಂಪ್ರದಾಯಕ್ಕೆ ತಿಲಾಂಜಲಿ.

10 ಆಧಾರ್‌ ಕಡ್ಡಾಯದಿಂದ ಮುಕ್ತಿ
ಆಧಾರ್‌ ಕಾರ್ಡ್‌ಗಳ ಮೂಲ ಉದ್ದೇಶಕ್ಕೆ ತಕ್ಕಂತೆ ಅದರ ಬಳಕೆಗೆ ಕಡಿವಾಣ. ಸದ್ಯಕ್ಕಿರುವಂತೆ ಆಧಾರ್‌ ಕಾರ್ಡ್‌ ಲಿಂಕಿಂಗ್‌ಗೆ ಕಡಿವಾಣ. ಆಧಾರ್‌ ಮಾಹಿತಿಗಳು ಸೋರಿಕೆಯಾಗದಂತೆ ಕ್ರಮ.

Advertisement

Udayavani is now on Telegram. Click here to join our channel and stay updated with the latest news.

Next