ಆಗ್ರಾ : ”ಟಿವಿಯಲ್ಲಿ ಕೇವಲ 30 ಸೆಕೆಂಡುಗಳ ಚುನಾವಣಾ ಜಾಹೀರಾತಿಗೆ ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗುತ್ತದೆ; ಹಾಗಿರುವಾಗ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಟಿವಿ ಜಾಹೀರಾತು ಪ್ರಚಾರಕ್ಕೆ ಯಾರು ಹಣ ಕೊಡುತ್ತಿದ್ದಾರೆ ?” ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಫತೇಪುರ ಸಿಕ್ರಿಯಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ರಾಜ್ ಬಬ್ಬರ್ ಪರವಾಗಿ ಇಂದು ಸೋಮವಾರ ಇಲ್ಲಿ ನಡೆದ ಚುನಾವಣಾ ರಾಲಿಯಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಿದ್ದರು. ಈ ಕ್ಷೇತ್ರಕ್ಕೆ ಇದೇ ಎ.18ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ.
“ಎಲ್ಲಿ ನೋಡಿದರೂ ನರೇಂದ್ರ ಮೋದಿ ಅವರ ಪಬ್ಲಿಸಿಟಿಯೇ ಕಂಡು ಬರುತ್ತಿದೆ. ಇದಕ್ಕೆಲ್ಲ ಹಣ ಎಲ್ಲಿಂದ, ಯಾರಿಂದ ಬರುತ್ತಿದೆ ? ಮೋದಿ ಅವರ ಕಿಸೆಯಿಂದಂತೂ ಇದಕ್ಕೆ ಹಣ ಬರುತ್ತಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದರು.
”ಪ್ರಧಾನಿ ಮೋದಿ ಅವರು ಸಾರ್ವಜನಿಕರ ಹಣವನ್ನು ಲೂಟಿ ಮಾಡಿದ್ದಾರೆ ಮತ್ತು ಅದನ್ನು ದೇಶಭ್ರಷ್ಟ ಅರ್ಥಿಕ ಅಪರಾಧಿಗಳಾದ ನೀರವ್ ಮೋದಿ, ಮೆಹುಲ್ ಚೋಕ್ಸಿ ಮತ್ತು ವಿಜಯ್ ಮಲ್ಯ ಅವರಿಗೆ ನೀಡಿದ್ದಾರೆ” ಎಂದು ರಾಹುಲ್ ಆರೋಪಿಸಿದರು.
ಮೋದಿ ಅವರ ವಿಫಲ ಭರವಸೆಗಳನ್ನು ಟೀಕಿಸಿದ ರಾಹುಲ್ ಗಾಂಧಿ, “ಕಳೆದ ಲೋಕಸಭಾ ಚುನವಾಣೆಯ ವೇಳೆ ಮೋದಿ ಅವರು ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು; ಹಾಗೆಯೇ ಪ್ರತಿಯೋರ್ವ ಭಾರತೀಯರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಜಮೆ ಮಾಡುವುದಾಗಿ ಹೇಳಿದ್ದರು. ಮೋದಿ ನೀಡಿದ್ದ ಈ ಭರವಸೆಗಳೆಲ್ಲ ಸುಳ್ಳು ಎಂಬುದನ್ನು ಮತದಾರರು ತಡವಾಗಿ ಕಂಡುಕೊಂಡಿದ್ದಾರೆ” ಎಂದು ರಾಹುಲ್ ವ್ಯಂಗ್ಯವಾಡಿದರು.