ಹೊಸದಿಲ್ಲಿ : ನೋಟು ಅಮಾನ್ಯದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಬಡ ರೈತರ ಹಣವನ್ನು ಲೂಟಿ ಮಾಡಿ ಬ್ಯಾಂಕ್ ಸಾಲ ಸುಸ್ತಿಗಾರರಾಗಿರುವ ತಮ್ಮ ಮಿತ್ರ ವಿಜಯ್ ಮಲ್ಯ, ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿಗೆ ನೆರವಾಗಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಸನ್ನಿಹಿತವಾಗುತ್ತಿರುವಂತೆಯೇ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧದ ತನ್ನ ವಾಕ್ ಸಮರವನ್ನು ತೀವ್ರಗೊಳಿಸಿದ್ದಾರೆ. ಅಂದ ಹಾಗೆ ಛತ್ತೀಸ್‌ಗಢ 19 ಜಿಲ್ಲೆಗಳಲ್ಲಿ ಹರಡಿಕೊಂಡಿರುವ 72 ಕ್ಷೇತ್ರಗಳಿಗೆ ನಡೆಯುವ ಎರಡನೇ ಹಂತದ ಚುನಾವಣೆಗೆ ಮತದಾನವು ಇದೇ ನ.20ರಂದು ನಡೆಯಲಿದೆ. ನ.12ರಂದು 18 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆದಿತ್ತು. ಡಿಸೆಂಬರ್ 11ರಂದು ಮತ ಎಣಿಕೆ ನಡೆದು ಚುನಾವಣಾ ಫಲಿತಾಂಶ ಹೊರಬೀಳಲಿದೆ.
ಮೋದಿ ವಿರುದ್ಧ ಟ್ವಿಟರ್ ನಲ್ಲಿ ತನ್ನ ವಾಕ್ಸಮರವನ್ನು ತೀವ್ರಗೊಳಿಸಿರುವ ರಾಹುಲ್ ಗಾಂಧಿ, “ನೀವೆಂದಾದರೂ ಮಲ್ಯ, ಮೆಹುಲ್ ಭಾಯಿ, ನೀರವ್ ಮೋದಿ ಗೋಧಿ ಬೆಳೆದದ್ದನ್ನು ಕಂಡಿದ್ದೀರಾ ? ಮೋದೀಜೀ ಅವರೇ, ನೀವು ರೈತರನ್ನು ಅಪಮಾನಿಸಬೇಡಿ; ನೋಟು ಅಮಾನ್ಯದ ಮೂಲಕ ನೀವು ಬಡ ರೈತರ ಕಷ್ಟದ ಸಂಪಾದನೆಯನ್ನು ಕೊಳ್ಳೆ ಹೊಡೆದು ನಿಮ್ಮ ಸೂಟು ಬೂಟು ಮಿತ್ರರಾದ ಮಲ್ಯ, ಮೆಹುಲ್, ನೀರವ್ ಮೋದಿಗೆ ಕೊಟ್ಟಿದ್ದೀರಿ. 3.7 ಲಕ್ಷ ರೂ. ಕಾರ್ಪೊರೇಟ್ ಸಾಲವನ್ನು ಮನ್ನಾ ಮಾಡಿದ್ದೀರಿ. ಆದರೆ ರೈತರ ಒಂದೇ ಒಂದು ಪೈಸೆ ಕೃಷಿ ಸಾಲವನ್ನು ನೀವು ಮನ್ನಾ ಮಾಡಿಲ್ಲ ಏಕೆ ? ಬದಲಾಗಿ ನೀವೀಗ ರೈತರ ಸಂಪತ್ತನ್ನೇ ಕಾಳಧನ ಎಂದು ಕರೆಯುತ್ತಿದ್ದೀರಿ. ರೈತರಿಗೆ ನೀವು ಈ ರೀತಿ ಮಾಡುತ್ತಿರುವ ಅಪಮಾನವನ್ನು ಭಾರತ ಸಹಿಸುವುದಿಲ್ಲ’ ಎಂದು ಹಿಂದಿ ಬರಹದ ಮೂಲಕ ಪ್ರಧಾನಿ ಮೋದಿಗೆ ಎಚ್ಚರಿಕೆ ನೀಡಿದ್ದಾರೆ.
“ಬಿಜೆಪಿ ಎರಡು ಛತ್ತೀಸ್‌ಗಢವನ್ನು ಸೃಷ್ಟಿಸಿದೆ; ಒಂದು ಬಡವರದ್ದು, ಇನ್ನೊಂದು ಸಿರಿವಂತರದ್ದು. ಬಡವರನ್ನು ಲೂಟಿ ಮಾಡಿ ಸಿರಿವಂತರಿಗೆ ನೆರವಾಗುವುದನ್ನು ಮೋದಿಜೀ ಇನ್ನಾದರೂ ನಿಲ್ಲಿಸಿ’ ಎಂದಿರುವ ರಾಹುಲ್, ಕಾಂಗ್ರೆಸ್ ಪಕ್ಷ ಛತ್ತೀಸ್‌ಗಢ ವಿಧಾನಸಭೆಯಲ್ಲಿ ಅಧಿಕಾರಕ್ಕೆ ಬಂದರೆ ಕೇವಲ 10 ದಿನಗಳ ಒಳಗೆ ರಾಜ್ಯದ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುತ್ತದೆ’ ಎಂದು ಭರವಸೆ ಕೊಟ್ಟಿದ್ದಾರೆ.