ಲಂಡನ್ : ಭಾರತದ ಕ್ರಿಕೆಟ್ ಲೋಕದ ದಿಗ್ಗಜ ವಿನೂ ಮಂಕಡ್ ಅವರ ಪುತ್ರ ರಣಜಿ ಕ್ರಿಕೆಟ್ ಆಟಗಾರ ರಾಹುಲ್ ಮಂಕಡ್ ಬುಧವಾರ ನಿಧನ ಹೊಂದಿದ್ದಾರೆ.
ರಾಹುಲ್ ಅವರಿಗೆ 66 ವರ್ಷವಾಗಿತ್ತು. ಕ್ರಿಕ್‌ಬಜ್ ವರದಿ ಮಾಡಿದಂತೆ,ಈ ತಿಂಗಳ ಆರಂಭದಲ್ಲಿ ಅವರು ಹೃದಯಾಘಾತದಿಂದ ಬಳಲುತ್ತಿದ್ದರು ಮತ್ತು ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಬುಧವಾರ ಅವರ ಸಾವಿನ ಸುದ್ದಿ ಹೊರಬಿದ್ದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಗಣ್ಯರು ಸಂತಾಪ ಸೂಚಿಸಿದ್ದಾರೆ. ಭಾರತದ ಮಾಜಿ ವೇಗದ ಬೌಲರ್ ಟಿಎ ಶೇಖರ್ ಕೂಡ ಟ್ವೀಟ್ ಮಾಡಿ ರಾಹುಲ್ ಮಂಕಡ್ ನಿಧನದ ಬಗ್ಗೆ ತಮ್ಮ ಸಂತಾಪವನ್ನು ಸೂಚಿಸಿದ್ದಾರೆ.ನಿಧನ ಸುದ್ದಿ ಕೇಳಿ ಆಘಾತವಾಯಿತು, ಅವರು ಪ್ರಸಿದ್ಧ ಕ್ರಿಕೆಟ್ ಕುಟುಂಬದಿಂದ ಬಂದವರು ನಿಜವಾದ ಸಂಭಾವಿತ ಕ್ರಿಕೆಟಿಗ, ಅದಕ್ಕಿಂತಲೂ ಶ್ರೇಷ್ಠ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.
“ಕ್ರಿಕೆಟ್ ಭ್ರಾತೃತ್ವಕ್ಕೆ ತುಂಬಾ ದೊಡ್ಡ ನಷ್ಟ. ರಣಜಿ ಟ್ರೋಫಿ ವಿಜೇತ ಮತ್ತು ದಂತಕಥೆ ವಿನೂ ಮಂಕಡ್ ಅವರ ಕೊನೆಯ ಉಳಿದಿರುವ ಪುತ್ರ ರಾಹುಲ್ ಮಂಕಡ್ ಅವರು ಅಲ್ಪಾವಧಿಯ ಅನಾರೋಗ್ಯದ ನಂತರ ನಿಧನರಾದರು, ”ಎಂದು ಪತ್ರಕರ್ತ ಅಮೋಲ್ ಕರ್ಹಾಡ್ಕರ್ ಟ್ವೀಟ್ ಮಾಡಿದ್ದಾರೆ.
ರಾಹುಲ್ 1972 ರಿಂದ 1985 ರ ವರೆಗೆ ಮುಂಬಯಿ ಪರ ರಣಜಿ 47 ಪಂದ್ಯಗಳನ್ನು ಆಡಿದ್ದ ಅವರು 35.77 ಸರಸರಿಯೊಂದಿಗೆ 2,111 ರನ್ ಗಳಿಸಿದ್ದರು.