ಖಾನಾಪುರ: ಯುಪಿಎಸ್‌ಸಿ ಪರೀಕ್ಷೆಯಲ್ಲಿ 17ನೇ ರ್‍ಯಾಂಕ್ ಪಡೆದು ಅಪೂರ್ವ ಸಾಧನೆ ಮಾಡಿದ ರಾಹುಲ್ ಸಂಕನೂರಗೆ ಖಾನಾಪುರದ ಶೈಕ್ಷಣಿಕ ನಂಟು ಇದೆ. ಈತ ಇಲ್ಲಿಯ ಸರ್ವೋದಯ ವಿದ್ಯಾಲಯದ ವಿದ್ಯಾರ್ಥಿ ಎನ್ನುವುದು
ತಿಳಿದುಬರುತ್ತಿದ್ದಂತೆ ಶಿಕ್ಷಕ ವರ್ಗದ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಮಿತ್ರ ವಲಯದಲ್ಲಿ ಅವರ ಬಗ್ಗೆ ಅಭಿಮಾನ ಉಕ್ಕುತ್ತಿದೆ.
ಶಾಲೆಯ ಫಾದರ್ ಫಿಲಿಪ್ಸ್ ಮಂತೆಡೊ ಅವರು ತಮ್ಮ ಹಳೆಯ ವಿದ್ಯಾರ್ಥಿಯ ಬಗ್ಗೆ ಅಪಾರ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಆತನ ಶಾಲಾ ಸ್ನೇಹಿತರಿಗೆ ರಾಹುಲ್ ಸಾಧನೆ ಒಂದೆಡೆ ಅಚ್ಚರಿ ಮೂಡಿಸಿದರೆ ಇನ್ನೊಂದಡೆ ತಮ್ಮ ಗೆಳೆಯನ ಸಾಧನೆಗೆ ಸಂಭ್ರಮ ಪಟ್ಟಿದ್ದಾರೆ. ತಮ್ಮ ಸ್ನೇಹಿತ ವಲಯಕ್ಕೆಲ್ಲ ಸುದ್ದಿ ಮುಟ್ಟಿಸಿ ಸಿಹಿ ಹಂಚಿದ್ದಾರೆ.
ವಿನೋದ ಸಾತೋಸ್ಕರ ಮತ್ತು ಶಿವರಾಜ ಪಾಟೀಲ ರಾಹುಲ್‌ಗೆ ಆತ್ಮೀಯರಾಗಿದ್ದವರು. ರಾಹುಲ್ ಮೊದಲಿನಿಂದಲು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. 2011ರಲ್ಲಿ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನಕ್ಕೆ ಖಾನಾಪುರಕ್ಕೆ ಆಗಮಿಸಿದಾಗ ಒಟ್ಟಿಗೆ ಕುಳಿತು ರಾಹುಲನೊಂದಿಗೆ ಹರಟಿದ್ದು ನೆನಪಿಸಿಕೊಳ್ಳುತ್ತಾರೆ. ರಾಹುಲ ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ. ಆತ ನನ್ನ ಅತ್ಯಂತ ಪರಮಾಪ್ತ ಸ್ನೇಹಿತ ಎನ್ನುತ್ತಾರೆ ವಿನೋದ.
1999ರಲ್ಲಿ ಇಲ್ಲಿನ ಸರ್ವೋದಯ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ರಾಹುಲ್ 4 ನೇ ತರಗತಿಗೆ ದಾಖಲಾತಿ ಪಡೆದಿದ್ದರು. 2003ರಲ್ಲಿ 7ನೇ ತರಗತಿ ಮುಗಿಸಿ ಇಲ್ಲಿಂದ ಮೈಸೂರಿನ ರಾಮಕೃಷ್ಣ ವಿದ್ಯಾಶ್ರಮಕ್ಕೆ ತೆರಳಿದರು. ಓದಿನಲ್ಲಿ ಪ್ರತಿಭಾವಂತ. ಕ್ರಿಕೆಟ್ ಆಟದದತ್ತ ಹೆಚ್ಚು ಒಲವು ಹೊಂದಿದ್ದರು.
ಆತ ಒಳ್ಳೆಯ ಸ್ನೇಹ ಜೀವಿ. ಎಡಗೈನಿಂದ ಬರೆಯುವುದನ್ನು ಕೂಡ ಸಹಪಾಠಿಗಳು ನೆನಪಿಸಿಕೊಡಿದ್ದಾರೆ. ರಾಹುಲ್ ಸಾಧನೆ ಅವರ ಸ್ನೇಹಿತರಿಗೆ ಸಿಕ್ಕಾಪಟ್ಟೆ ಖುಷಿ ಮೂಡಿಸಿದೆ. ರಾಹುಲ್ 7ನೇ ತರಗತಿಯಲ್ಲಿ ಇದ್ದಾಗ ತರಗತಿ ಶಿಕ್ಷಕಿ ಶರ್ಮಿಲಾ ಅವರ ಪರಮ ಶಿಷ್ಯನಾಗಿದ್ದರು. ಪತ್ರಿಕೆಯಲ್ಲಿ ಬಂದ ನಂತರವೇ ನಮಗೆಲ್ಲ ಆತ ನಮ್ಮ ರಾಹುಲ ಎಂದು ತಿಳಿದಿದ್ದು ಎನ್ನುತ್ತ ಪುಳಕಿತ ಗೊಳ್ಳುತ್ತಿದ್ದಾರೆ.
5ನೇ ತರಗತಿಯಲ್ಲಿ ಶಾಲಾ ಫಾದರ್ ಅಲೆಕ್ಸ ಡಿಕ್ರೋಜ್ ಅವರ ಜೊತೆಗೆ ತೆಗೆಸಿಕೊಂಡ ಭಾವಚಿತ್ರವನ್ನು ಕೂಡ ಸ್ನೇಹಿತರು ಪ್ರೀತಿ ಅಭಿಮಾನಗಳಿಂದ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಯ ಸುರಿಮಳೆ ಆಗುತ್ತಿದೆ. ವಿಷಯ ಗೊತ್ತಿಲ್ಲದ ಅವರ ಬಾಲ್ಯಸ್ನೇಹಿತರಿಗೆ ಈ ಸಂತಸದ ಸುದ್ದಿ ಹಂಚಿಕೊಳ್ಳುತ್ತಿದ್ದಾರೆ.
ರಾಹುಲ್ ತಂದೆ ಲೋಕೋಪಯೋಗಿ ಇಲಾಖೆಯಲ್ಲಿ ಅಭಿಯಂತರು. ಇಲ್ಲಿಗೆ ವರ್ಗಾವಣೆಯಾಗಿ ಬಂದು ಮೂರು
ವರ್ಷ ಇಲ್ಲಿಯೇ ಕರ್ತವ್ಯ ನಿರ್ವಹಿಸಿದ್ದರು. ರಾಹುಲ್ ತಂದೆ ತಮ್ಮ ಬಳಿ ಬಂದು ತಮ್ಮ ಮಗನ ಓದಿನ ಬಗ್ಗೆ ಕಾಳಜಿಯಿಂದ ವಿಚಾರಿಸಿಕೊಳ್ಳುತ್ತಿದ್ದರು ಎಂದು ಶಾಲೆಯ ಸಿಬ್ಬಂದಿಯೊಬ್ಬರು ನೆನಪಿಸಿಕೊಂಡಿದ್ದಾರೆ. ರಾಜ್ಯಕ್ಕೆ ಪ್ರಥಮ ಸ್ಥಾನದ ಸಾಧನೆ ಮಾಡುವುದರ ಜೊತೆಗೆ ಖಾನಾಪುರಕ್ಕೆ ಕೂಡ ರಾಹುಲ ಕೀರ್ತಿ ತಂದು ಕೊಟ್ಟಿದ್ದಾರೆನ್ನುವುದು ಇಲ್ಲಿಯ ಜನರ ಸಂಭ್ರಮ.
ಕನ್ನಡ ಮರಾಠಿ ಮತ್ತು ಹಿಂದಿ ಭಾಷೆಗಳ ಸಂಗಮ ಹೊಂದಿದ ಖಾನಾಪುರ ವಿಭಿನ್ನ ಸಂಸ್ಕೃತಿಯ ಪ್ರದೇಶ. ಈ ಸಂಸ್ಕೃತಿ ನನ್ನ ಜೀವನದಲ್ಲಿ ಬಹುದೊಡ್ಡ ಬದಲಾವಣೆ ಮೂಡಿಸಿದೆ. ನನ್ನ ಬದುಕಿನ ಅಡಿಗಲ್ಲು ಕಂಡುಕೊಂಡಿದ್ದು ಇಲ್ಲಿಯೇ. ಇಲ್ಲಿ ಕಳೆದ ದಿನಗಳು ನನ್ನ ಜೀವನದಲ್ಲೇ ಮರೆಯಲಾರದ ಕ್ಷಣಗಳು.
ರಾಹುಲ್ ಸಂಕನೂರ