ಶಿವಮೊಗ್ಗ: ದೇಶದಲ್ಲಿ ಬದಲಾವಣೆಯ ಅಗತ್ಯವಿದೆ. ಅದೇ ಕಾರಣಕ್ಕಾಗಿ ರಾಹುಲ್ ಗಾಂಧಿಯವರು ಇಂದು ಹೆಜ್ಜೆ ಹಾಕುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಅವರು ಶುಕ್ರವಾರ ಭಾರತ್ ಜೋಡೋ ಪಾದಯಾತ್ರೆ ವೇಳೆ ಅಪಘಾತದಲ್ಲಿ ಮೃತಪಟ್ಟಿದ್ದ ಸಾಗರದ ಹುತ್ತದಿಂಬ ಗ್ರಾಮದ ರಮೇಶ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ಹೇಳಿದರು. ಬಳಿಕ ರಮೇಶ್ ಕುಟುಂಬಸ್ಥರಿಗೆ 10 ಲಕ್ಷ ರೂ. ಪರಿಹಾರ ಚೆಕ್ ವಿತರಿಸಿದರು. ಈ ವೇಳೆ ಕೈ ನಾಯಕರಾದ ಮಧು ಬಂಗಾರಪ್ಪ, ಬೇಳೂರು ಗೋಪಾಲಕೃಷ್ಣ, ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್ ಡಿಕೆಶಿಗೆ ಸಾಥ್ ನೀಡಿದರು.
ಬಳಿಕ ಮಾತನಾಡಿದ ಅವರು, ದುಃಖದ ಸಮಯದಲ್ಲಿ ನಾವೆಲ್ಲರೂ ಭಾಗಿಯಾಗಿದ್ದೇವೆ. ಭಾರತ್ ಜೋಡೋ ಯಾತ್ರೆಗೆ ಈ ಭಾಗದ ಬಹುತೇಕ ಮುಖಂಡರು- ಕಾರ್ಯಕರ್ತರು ಬಂದಿದ್ದರು. ರಮೇಶ್ ಪಕ್ಷದ ಬೂತ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಚುನಾವಣಾ ಸಂದರ್ಭದಲ್ಲಿ ಸ್ವಯಂಪ್ರೇರಿತ ಕೆಲಸ ಮಾಡುತ್ತಿದ್ದರು. ರಾಹುಲ್ ಗಾಂಧಿಯವರ ದೇಶದ ಐಕ್ಯತೆ, ಒಗ್ಗೂಡಿಸುವ ಯಾತ್ರೆಯಲ್ಲಿ ಹೆಜ್ಜೆ ಹಾಕಲು ಬಂದಿದ್ದರು. ಯಾತ್ರೆಯಲ್ಲಿ ಹೆಜ್ಜೆ ಹಾಕುವ ಮೂಲಕ ಪ್ರಾಣತ್ಯಾಗ ಮಾಡಿದ್ದಾರೆ. ಅದಕ್ಕಾಗಿಯೇ ನಾವೆಲ್ಲರೂ ಇಲ್ಲಿ ಬಂದು ನಿಮ್ಮ ಜೊತೆಗೆ ಇದ್ದೇವೆ ಎಂದು ಧೈರ್ಯ ಹೇಳಿದ್ದೇನೆ ಎಂದರು.
ಇದನ್ನೂ ಓದಿ:ಚಿಕನ್ ಅಂದ್ರೆ ತುಂಬಾ ಇಷ್ಟನಾ! ಹಾಗಾದ್ರೆ ಈ ಸುಲಭ ರೆಸಿಪಿ ನಿಮಗಾಗಿ….
ಭಾರತ್ ಜೋಡೋ ಪಾದಯಾತ್ರೆಗೆ ಬಿಜೆಪಿ ಟೀಕೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಅಸೂಯೆಗೆ ಮದ್ದಿಲ್ಲ. ಅವರು ಯಾವುದಾದರೂ ಇಂತಹ ಸಾಹಸಕ್ಕೆ ಕೈ ಹಾಕಿದ್ದಾರಾ? ದೇಶಕ್ಕೆ ಏನಾದರೂ ಪ್ರಾಣ ಕೊಟ್ಟಿದ್ದಾರಾ? ಸ್ವಾತಂತ್ರ್ಯ ತಂದಿದ್ದಾರಾ? ಸಂವಿಧಾನ ತಂದಿದ್ದಾರಾ? ಬಡವರಿಗೆ ಮನೆ, ರೈತರಿಗೆ ಭೂಮಿ ಕೊಟ್ಟಿದ್ದಾರಾ? ನಾವು ತಂದ ಪ್ರಜಾಪ್ರಭುತ್ವದಿಂದಲೇ ಅವರಿಗೆ ಶಕ್ತಿ ಬಂದಿದೆ. ಅದಕ್ಕಾಗಿ ಟೀಕೆ ಮಾಡುತ್ತಿದ್ದಾರೆ. ಟೀಕೆ ಮಾಡಿಕೊಂಡೇ ಇರಲಿ, ನಾವು ಬಡವರ ಪರವಾಗಿ ಇರುತ್ತೇವೆ ಎಂದರು.
ಖರ್ಗೆ ಎಐಸಿಸಿ ಅಧ್ಯಕ್ಷರಾದ ಕಾರಣ ಡಿಕೆ ಶಿವಕುಮಾರ್, ಸಿದ್ದರಾಮಯ್ಯಗೆ ಭಯ ಶುರುವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ‘ಒಳ್ಳೆಯದು.. ನಳಿನ್ ಕುಮಾರ್ ಕಟೀಲ್ ಹೇಳಿದ್ದು ಸಂತೋಷ’ ಎಂದರು.