Advertisement

ಮುಗಿಯದ ‘ಸಾವರ್ಕರ್‌’ವಿವಾದ : ರಾಹುಲ್‌ ಗಾಂಧಿ ಕ್ಷಮೆಗೆ ಮಾಜಿ ಸಿಎಂ ಫ‌ಡ್ನವೀಸ್‌ ಪಟ್ಟು

10:03 AM Dec 17, 2019 | Hari Prasad |

ನಾಗ್ಪುರ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ‘ಸಾವರ್ಕರ್‌ ವಿವಾದ’ ಇನ್ನೂ ತಣ್ಣಗಾಗಿಲ್ಲ. ‘ಕ್ಷಮೆ ಕೇಳಲು ನಾನು ರಾಹುಲ್‌ ಸಾವರ್ಕರ್‌ ಅಲ್ಲ’ ಎಂಬ ರಾಹುಲ್‌ ಹೇಳಿಕೆ ವಿರುದ್ಧ ಬಿಜೆಪಿ ಸಿಡಿದೆದ್ದಿದೆ. ಈ ಹೇಳಿಕೆ ಕುರಿತು ರವಿವಾರ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫ‌ಡ್ನವೀಸ್‌, ‘ರಾಹುಲ್‌ ಕೂಡಲೇ ಬೇಷರತ್‌ ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದ್ದಾರೆ.

Advertisement

ಜತೆಗೆ, ಮಹಾರಾಷ್ಟ್ರ ವಿಧಾನಸಭೆ ಅಧಿವೇಶನದ ಹಿನ್ನೆಲೆಯಲ್ಲಿ ಸಿಎಂ ಉದ್ಧವ್‌ ಠಾಕ್ರೆ ಅವರು ಆಯೋಜಿಸಿರುವ ಔಪಚಾರಿಕ ಟೀ ಪಾರ್ಟಿಯನ್ನು ಬಹಿಷ್ಕರಿಸುತ್ತಿರುವುದಾಗಿಯೂ ಘೋಷಿಸಿದ್ದಾರೆ. ಇದೇ ವೇಳೆ, ರಾಹುಲ್‌ ಹೇಳಿಕೆ ಖಂಡಿಸಿ ಬಿಜೆಪಿ ನಾಯಕರು ರವಿವಾರ ಬೊರಿ ವಿಲಿಯಿಂದ ಪಾದಯಾತ್ರೆ ಆರಂಭಿಸಿದ್ದು, 25 ಕಿ.ಮೀ. ದೂರದ ಶಿವಾಜಿ ಪಾರ್ಕ್‌ವರೆಗೆ ಇದು ನಡೆಯಲಿದೆ.

ಇನ್ನೊಂದೆಡೆ, ವೀರ ಸಾವರ್ಕರ್‌ರನ್ನು ಅವಮಾನಿಸಿರುವ ರಾಹುಲ್‌ರನ್ನು ದೇಶ ಯಾವತ್ತೂ ಕ್ಷಮಿಸಲ್ಲ ಎಂದಿರುವ ಬಿಜೆಪಿ ವಕ್ತಾರ ಶಹನವಾಜ್‌ ಹುಸೇನ್‌, ‘ಶಿವ ಸೇನೆಯು ತಮಗೆ ಅಧಿಕಾರ ಬೇಕೋ, ಸಾವರ್ಕರ್‌ ಬೇಕೋ ಎಂಬುದನ್ನು ನಿರ್ಧರಿಸಲಿ’ ಎಂದು ಸವಾಲು ಹಾಕಿದ್ದಾರೆ.

ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸುವ ವೇಳೆ ರಾಹುಲ್‌ ಅವರು ‘ಇಂದಿನ ಪರಿಸ್ಥಿತಿ ಮೇಕ್‌ ಇನ್‌ ಇಂಡಿಯಾ ಬದಲಾಗಿ ರೇಪ್‌ ಇನ್‌ ಇಂಡಿಯಾ ಎಂಬಂತಾಗಿದೆ’ ಎಂದು ಹೇಳಿದ್ದರು. ಈ ಹೇಳಿಕೆ ಖಂಡಿಸಿದ್ದ ಬಿಜೆಪಿ, ರಾಹುಲ್‌ರಿಂದ ಕ್ಷಮೆಗೆ ಆಗ್ರಹಿಸಿತ್ತು. ಕ್ಷಮೆಯಾಚಿಸಲು ನಿರಾಕರಿಸಿದ್ದ ರಾಹುಲ್‌, ನಾನು ಸಾವರ್ಕರ್‌ ಅಲ್ಲ ಎಂಬ ಹೇಳಿಕೆಯನ್ನು ಶನಿವಾರ ನೀಡಿದ್ದರು.

ಮಾನಹಾನಿ ಕೇಸ್‌ ದಾಖಲಿಸುವೆ
ರಾಹುಲ್‌ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ವೀರ ಸಾವರ್ಕರ್‌ ಅವರ ಮೊಮ್ಮಗ ರಣಜೀತ್‌ ಸಾವರ್ಕರ್‌, ‘ಅವರ ಹೇಳಿಕೆ ದುರದೃಷ್ಟಕರ. ಈ ಕುರಿತು ನಾನು ಸಿಎಂ ಉದ್ಧವ್‌ ಠಾಕ್ರೆ ಜತೆಗೂ ಮಾತನಾಡುತ್ತೇನೆ. ಅಲ್ಲದೆ, ರಾಹುಲ್‌ ವಿರುದ್ಧ ಮಾನಹಾನಿ ಮೊಕದ್ದಮೆಯನ್ನೂ ಹೂಡುತ್ತೇನೆ’ ಎಂದಿದ್ದಾರೆ.

Advertisement

ಸಾವರ್ಕರ್‌ ದೃಷ್ಟಿಕೋನಕ್ಕೆ ವಿರುದ್ಧ
ಕೇಂದ್ರ ಸರಕಾರ ಜಾರಿಗೆ ತಂದಿರುವ ಹೊಸ ಪೌರತ್ವ ಕಾನೂನು ಹಿಂದುತ್ವದ ಹರಿಕಾರ ವಿ.ಡಿ.ಸಾವರ್ಕರ್‌ ಅವರ ದೃಷ್ಟಿಕೋನಕ್ಕೆ ಸಂಪೂರ್ಣ ವಿರುದ್ಧವಾದದ್ದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹೇಳಿದ್ದಾರೆ. ಮಹಿಳೆಯರ ಸುರಕ್ಷತೆ, ಕೃಷಿ ಬಿಕ್ಕಟ್ಟು, ನಿರುದ್ಯೋಗ ಸಮಸ್ಯೆಯಂಥ ವಿಚಾರಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಕೇಂದ್ರ ಸರಕಾರವು ಈ ಪೌರತ್ವ ಕಾಯ್ಕೆಯನ್ನು ಬಳಸಿಕೊಂಡಿದೆ ಎಂದೂ ಅವರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next