ಬೆಂಗಳೂರು: “ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರ ಹೆಸರು ಹೇಳಿಕೊಂಡು ಪ್ರಚಾರ ನಡೆಸಿದರೆ ಮತ ಬರುವುದಿಲ್ಲ ಎಂಬ ಕಾರಣಕ್ಕೆ ಅವರ ಭಾವಚಿತ್ರ ಮರೆ ಮಾಡುವುದು ಹಾಗೂ ಕೇಸರಿ ಶಾಲು ಧರಿಸುವ ತಂತ್ರಗಳನ್ನು ಕಾಂಗ್ರೆಸ್ ಅನುಸರಿಸುತ್ತಿದೆ’ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿದರು.
ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಕೆಟ್ ಹಂಚಿಕೆ ವೇಳೆ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿತ್ತು. ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಸೇರಿ ಹಲವು ಕ್ಷೇತ್ರಗಳಲ್ಲಿ ಇನ್ನೂ ಅಸಮಾಧಾನ ಮುಂದುವರಿದಿದ್ದು, ಮೈತ್ರಿ ಪಕ್ಷಗಳ ಕಾರ್ಯಕರ್ತರು ಒಂದಾಗುತ್ತಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ರಾಹುಲ್ ಗಾಂಧಿ ಭಾವಚಿತ್ರವನ್ನು ಅಂಚೆ ಚೀಟಿ ಅಳತೆಯಷ್ಟಕ್ಕೆ ಕುಗ್ಗಿಸಲಾಗಿದೆ. ಮಂಗಳೂರಿನಲ್ಲಿ ಕೇಸರಿ ಶಾಲು ಧರಿಸಿ ಕಾಂಗ್ರೆಸ್ ಪ್ರಚಾರ ಮಾಡುತ್ತಿದೆ. ರಾಹುಲ್‌ಗಾಂಧಿ ಹೆಸರು ಹೇಳಿದರೆ ಮತ ಬರುವುದಿಲ್ಲ ಎಂಬ ಆತಂಕ ಕಾಂಗ್ರೆಸ್ ಪಕ್ಷದವರಿಗಿದೆ. ಆದರೆ ನಮಗೆ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಿಶ್ವಾಸವಿದ್ದು, ಅವರ ಹೆಸರಿನಲ್ಲೇ ಮತ ಯಾಚಿಸುತ್ತೇವೆ ಎಂದು ಹೇಳಿದರು.
ಮಂಡ್ಯ, ಹಾಸನ ಜಿಲ್ಲಾಧಿಕಾರಿಗಳನ್ನು ರಾಜ್ಯ ಚುನಾವಣಾ ಆಯೋಗ ವರ್ಗಾವಣೆ ಮಾಡಿರುವುದು ಸ್ವಾಗತಾರ್ಹ. ನಿಷ್ಪಕ್ಷಪಾತ ಹಾಗೂ ಮುಕ್ತ ಚುನಾವಣೆಗೆ ಕ್ರಮ ಕೈಗೊಳ್ಳಬೇಕೆಂಬ ಬಿಜೆಪಿ ಮನವಿಗೆ ಆಯೋಗ ಸ್ಪಂದಿಸಿದೆ ಎಂದರು. ರಾಜ್ಯದ 21 ಕಡೆ ವಿಜಯ ಸಂಕಲ್ಪ ಯಾತ್ರೆ ನಡೆಯಲಿದೆ. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ಜಿಲ್ಲೆಯಲ್ಲಿ ಯಾತ್ರೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಉಪಸ್ಥಿತರಿದ್ದರು.
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೊಂದಿಗೆ ಈಗಾಗಲೇ ರೋಡ್ ಶೋ ಆರಂಭಿಸಿ ಪ್ರಚಾರ ನಡೆಸಿದ್ದೇನೆ. ಮುಂದೆಯೂ ಜೊತೆಯಲ್ಲೇ ಇದ್ದು ಪ್ರಚಾರ ನಡೆಸುತ್ತೇನೆ. ಬೆಂಗಳೂರು ದಕ್ಷಿಣದಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬರುವುದು ನನ್ನ ಹೊಣೆ ಎಂದು ಈಗಾಗಲೇ ನಾನು ಹೇಳಿದ್ದೇನೆ. ಆ ಮಾತಿಗೆ ಈಗಲೂ ಬದ್ಧ.
– ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ