ಹೊಸದಿಲ್ಲಿ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ (Dr Manmohan Singh) ಅವರು ನಿಧನರಾದ ಕೆಲ ದಿನಗಳಲ್ಲೇ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ವಿದೇಶ ಪ್ರವಾಸಕ್ಕೆ ಹೊರಟಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಸಿಂಗ್ ಅವರ ಅಂತ್ಯಕ್ರಿಯೆಯ ವ್ಯವಸ್ಥೆಯಲ್ಲಿ ಕೇಂದ್ರದ ಕಳಪೆ ನಿರ್ವಹಣೆಯ ವಿಚಾರಕ್ಕಿಂತ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಎಂದು ಕಾಂಗ್ರೆಸ್ ಆರೋಪಗಳನ್ನು ತಳ್ಳಿಹಾಕಿದೆ.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಎಕ್ಸ್ ಪೋಸ್ಟ್ ನಲ್ಲಿ ರಾಹುಲ್ ಗಾಂಧಿ ಅವರನ್ನು ಸಂವೇದನಾ ರಹಿತರು ಎಂದು ಆರೋಪಿಸಿದಾಗ ವಿವಾದ ಪ್ರಾರಂಭವಾಯಿತು. “ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನಕ್ಕೆ ದೇಶವು ಶೋಕಿಸುತ್ತಿರುವಾಗ, ರಾಹುಲ್ ಗಾಂಧಿ ಹೊಸ ವರ್ಷವನ್ನು ಆಚರಿಸಲು ವಿಯೆಟ್ನಾಂಗೆ ಹಾರಿದ್ದಾರೆ” ಎಂದು ಮಾಳವಿಯಾ ಹೇಳಿದರು.
ಆಪರೇಷನ್ ಬ್ಲೂ ಸ್ಟಾರ್ ಅನ್ನು ತರಾಟೆಗೆ ತೆಗೆದುಕೊಂಡ ಅವರು, “ಗಾಂಧಿಗಳು ಮತ್ತು ಕಾಂಗ್ರೆಸ್ ಸಿಖ್ಖರನ್ನು ದ್ವೇಷಿಸುತ್ತಾರೆ. ಇಂದಿರಾ ಗಾಂಧಿಯವರು ದರ್ಬಾರ್ ಸಾಹಿಬ್ ಅನ್ನು ಅಪವಿತ್ರಗೊಳಿಸಿದ್ದಾರೆ ಎಂಬುದನ್ನು ಎಂದಿಗೂ ಮರೆಯಬೇಡಿ.” ಎಂದರು.
ಕಾಂಗ್ರೆಸ್ ಇದಕ್ಕೆ ತಿರುಗೇಟು ನೀಡಿದೆ. ಹಿರಿಯ ನಾಯಕ ಮಣಿಕಮ್ ಟಾಗೋರ್ ಅವರು ತಿರುಗೇಟು ನೀಡಿದ್ದು, “ಈ ಸಂಘಿಗಳು ಯಾವಾಗ ಈ ತಿರುಚುವ ರಾಜಕೀಯ ನಿಲ್ಲಿಸುತ್ತಾರೆ. ಯಮುನಾ ದಡದಲ್ಲಿ ಡಾ ಮನಮೋಹನ್ ಸಿಂಗ್ ಸಾಹೇಬರಿಗೆ ಶವಸಂಸ್ಕಾರಕ್ಕೆ ಸ್ಥಳವನ್ನು ಮೋದಿ ನಿರಾಕರಿಸಿದ ರೀತಿ ಮತ್ತು ಅವರ ಮಂತ್ರಿಗಳು ಡಾ ಸಾಹೇಬ್ ಅವರ ಕುಟುಂಬವನ್ನು ಹೇಗೆ ಮೂಲೆಗುಂಪು ಮಾಡಿದರು ಎನ್ನುವುದು ನಾಚಿಕೆಗೇಡಿನ ವಿಚಾರ ಎಂದು ಟಾಗೋರ್ ಹೇಳಿದರು.
“ಒಂದು ವೇಳೆ ರಾಹುಲ್ ಗಾಂಧಿ ಅವರು ಖಾಸಗಿಯಾಗಿ ಪ್ರವಾಸ ಮಾಡಿದರೆ, ಅದು ನಿಮಗೆ ಯಾಕೆ ತೊಂದರೆ?” ಎಂದು ಕಟುವಾಗಿ ಪ್ರಶ್ನಿಸಿದರು.
ಡಾ ಮನಮೋಹನ್ ಸಿಂಗ್ ಅವರ ನಿಧನದ ಬಳಿಕ ಎರಡು ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿದೆ. ಸಿಂಗ್ ಅವರ ಬೂದಿ ವಿಸರ್ಜನೆ ಸಮಾರಂಭದಲ್ಲಿ ಗಾಂಧಿ ಕುಟುಂಬ ಏಕೆ ಹಾಜರಾಗಲಿಲ್ಲ ಎಂದು ಭಾನುವಾರ ಬಿಜೆಪಿ ಪ್ರಶ್ನಿಸಿತ್ತು, ಇದಕ್ಕೆ ಕಾಂಗ್ರೆಸ್ ಅವರು ಕುಟುಂಬದ ಖಾಸಗಿತನವನ್ನು ಗೌರವಿಸುತ್ತಾರೆ ಎಂದು ಉತ್ತರಿಸಿದೆ.