ಹೊಸದಿಲ್ಲಿ : ರಾಹುಲ್ ಗಾಂಧಿ ಕೈಗೊಂಡ ನಿರ್ಧಾರಗಳೇ ವಿರೋಧ ಪಕ್ಷಗಳಲ್ಲಿ ವಿಭಜನೆ ಉಂಟುಮಾಡಿದವು ಮತ್ತು ಅದರಿಂದಾಗಿ ಪ್ರಧಾನಿ ನರೇಂದ್ರ ಮೋದಿ ವಿಜಯದ ಬಾಗಿಲುಗಳು ತೆರೆದುಕೊಂಡವು ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅತುಲ್ ಕುಮಾರ್ ಅಂಜಾನ್ ಆರೋಪಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯ ಮತ ಎಣಿಕೆ ಇಂದು ಗುರುವಾರ ನಡೆಯುತ್ತಿದ್ದು ಪ್ರಧಾನಿ ಮೋದಿ ಅವರ ಭಾರೀಯ ಜನತಾ ಪಕ್ಷ 292 ಸೀಟುಗಳಲ್ಲಿ ಮುನ್ನಡೆಯನ್ನು ಹೊಂದಿದೆ. ಕಾಂಗ್ರೆಸ್ 50 ಸೀಟುಗಳಲ್ಲಿ ಮಾತ್ರವೇ ಮುಂದಿದೆ.
ಬಿಜೆಪಿಯು ಈ ಮಹಾ ಚುನಾವಣೆಯನ್ನು ಸಾಮಾಜಿಕ ಮತ್ತು ಧಾರ್ಮಿಕ ವಿಭಜನೆಯ ನೀತಿಗಳಿಂದ ಗೆದ್ದಿದೆ. ಇದೇ ವೇಳೆ ರಾಹುಲ್ ಗಾಂಧಿ ಅವರ ತಪ್ಪು ನೀತಿಗಳಿಂದಾಗಿ ವಿರೋಧ ಪಕ್ಷಗಳ ಏಕತೆ ದುರ್ಬಲವಾಗಿದೆ. ಇದರಿಂದಾಗಿಯೇ ಮೋದಿಗೆ ವಿಜಯದ ಅದೃಷ್ಟ ಖುಲಾಯಿಸಿದೆ ಎಂದು ಅತುಲ್ ಕುಮಾರ್ ಹೇಳಿದರು.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 282 ಸ್ಥಾನ ಗೆದ್ದಿತ್ತು. ಬಿಜೆಪಿ ನೇತೃತ್ವದ ಎನ್‌ಡಿಎ 343 ಸ್ಥಾನ ಗೆದ್ದಿತ್ತು. ಆದರೆ ಈ ಬಾರಿ ಈ ವರೆಗಿನ ಟ್ರೆಂಡ್ ನೋಡಿದರೆ ಬಿಜೆಪಿ ಮತ್ತು ಎನ್‌ಡಿಎ ಕಳೆದ ಬಾರಿಗಿಂತಲೂ ಉತ್ತಮ ಸಾಧನೆ ಮಾಡಬಹುದು ಎಂದು ಅತುಲ್ ಕುಮಾರ್ ಹೇಳಿದರು.