ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೆಹಲಿ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಕಳೆದ ವಾರ ಹಠಾತ್ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳ ಜೊತೆ ಭೋಜನ ಸವಿದು ಬಳಿಕ ಕೆಲಹೊತ್ತು ಸಂವಾದ ನಡೆಸಿದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ರಾಹುಲ್ ಗಾಂಧಿಗೆ ನೊಟೀಸ್ ಜಾರಿ ಮಾಡಿದೆ.
ಎರಡು ಪುಟಗಳ ನೊಟೀಸ್ ಜಾರಿ ಮಾಡಿದ ವಿಶ್ವವಿದ್ಯಾಲಯದ ಪ್ರಾಂಶುಪಾಲರಾದ ಕೆಪಿ ಸಿಂಗ್, ಝಡ್ ಪ್ಲಸ್ ಭದ್ರತೆ ಹೊಂದಿರುವ ರಾಷ್ಟ್ರೀಯ ಪಕ್ಷದ ನಾಯಕರಿಂದ ಇಂತಹ ವರ್ತನೆ ಶೋಭೆ ತರುವಂತದ್ದಲ್ಲ ಅಲ್ಲದೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದಲೂ ಈ ರೀತಿಯ ಭೇಟಿ ಅಪಾಯಕಾರಿಯಾಗಿದೆ, ಇನ್ನು ಮುಂದಿನ ದಿನಗಳಲ್ಲಿ ಈ ರೀತಿಯ ತಪ್ಪುಗಳು ಪುನರಾವರ್ತನೆಯಾಗಬಾರದು ಎಂದು ಹೇಳಿ ನೊಟೀಸ್ ನೀಡಿದೆ.
ವಿದ್ಯಾರ್ಥಿಗಳ ಪೋಷಕರು ಹಾಗೂ ಹೊರಗಿನ ವ್ಯಕ್ತಿಗಳು ಹಾಸ್ಟೆಲ್ ಆವರಣದಲ್ಲಿ ಶೈಕ್ಷಣಿಕ ವಿಚಾರ ಹಾಗೂ ಕೌನ್ಸಿಲಿಂಗ್ ಚಟುವಟಿಕೆಗಳನ್ನು ಹೊರತುಪಡಿಸಿ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳಬಾರದು ಎಂದು ವಿಶ್ವವಿದ್ಯಾಲಯ ಸೂಚನೆ ನೀಡಿದೆ.
ಕಳೆದ ಶುಕ್ರವಾರ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪುರುಷರ ಹಾಸ್ಟೆಲ್‌ಗೆ ದಿಡೀರ್ ಭೇಟಿ ನೀಡಿದ ರಾಹುಲ್ ಕೆಲವು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು ಮತ್ತು ಅವರೊಂದಿಗೆ ಭೋಜನವನ್ನು ಸವಿದಿದ್ದಾರೆ. ಈ ವಿಚಾರ ವಿಶ್ವವಿದ್ಯಾಲಯದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿತ್ತು ಈ ಕುರಿತು ಆಡಳಿತ ಮಂಡಳಿ ಸಭೆ ನಡೆಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೊಟೀಸ್ ಜಾರಿಗೊಳಿಸುವ ಕುರಿತು ಚರ್ಚೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ‘ಆಪರೇಷನ್ ಕಮಲ’… ಪರಿಸ್ಥಿತಿ ಉದ್ಭವಿಸುವುದಿಲ್ಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ