ಬೆಂಗಳೂರು: “ಭಾರತ್ ಜೋಡೊ ಯಾತ್ರೆ” ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು 21 ದಿನ ಕರ್ನಾಟಕದಲ್ಲೆ ಇರಲಿದ್ದು “ಭಾರತ್ ಜೋಡೊ ಯಾತ್ರೆ” ದೇಶವೇ ಗಮನಿವಷ್ಟರ ಮಟ್ಟಿಗೆ ಯಶಸ್ವಿಗೊಳಿಸಬೇಕು ಎಂದು ಕಾರ್ಯಕರ್ತರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ಶನಿವಾರ, ಕೆಪಿಸಿಸಿ ಹಿಂದುಳಿದ ವಿಭಾಗ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಗಾಲೇ ಸ್ವತಂತ್ರ ನಡಿಗೆಯಲ್ಲಿ ಹೆಜ್ಜೆ ಹಾಕಿ ದೊಡ್ಡ ಮಟ್ಟದ ಯಶಸ್ಸು ತಂದಿದ್ದೀರಿ.ಅದೇ ರೀತಿಯಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಕಾರ್ಯಕ್ರಮ ಇಡೀ ದೇಶ ಕರ್ನಾಟಕದ ಕಡೆಗೆ ನೋಡುವಂತೆ ಮಾಡಿ ಎಂದು ಮನವಿ ಮಾಡಿದರು.
ಭಾರತ ಜೋಡೋ ಯಾತ್ರೆ ರಾಜ್ಯದುದ್ದಕ್ಕೂ ನಡೆಯಲಿದೆ. ಆಯಾ ಜಿಲ್ಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹೆಜ್ಜೆ ಹಾಕಬೇಕು.ಈ ಸಂಬಂಧ ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ಜಿಲ್ಲಾ ಮುಖಂಡರ ಜತೆ ಮಾತನಾಡಿರುವುದಾಗಿ ಹೇಳಿದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಜಾಹೀರಾತಿನಲ್ಲಿ ನೆಹರೂ ಫೋಟೋ ಕೈಬಿಟ್ಟು ಆರ್ ಎಸ್ ಎಸ್ ಮುಖಂಡರನ್ನು ಓಲೈಕೆ ಮಾಡುವ ಕೆಲಸಕ್ಕೆ ಕೈ ಹಾಕಿದರು. ಇತಿಹಾಸದ ಚರಿತ್ರೆ ತಿರುಚಿಸುವ ಕೆಲಸ ಮಾಡಿದರು. ಆದರೆ ಈ ದೇಶದ ಇತಿಹಾಸ ತಿರುಚಲು ಯಾರಿಂದ ಸಾಧ್ಯವಿಲ್ಲ. ಜನರು ದೇಶದ ಇತಿಹಾಸ ಓದಿಕೊಂಡಿದ್ದಾರೆ ಎಂದರು.