Advertisement

ಸಂಸತ್‌ನಲ್ಲಿ ರಾಹುಲ್‌ ವರ್ಸಸ್‌ ಬಿಜೆಪಿ

09:06 PM Feb 07, 2023 | Team Udayavani |

ನವದೆಹಲಿ: ಗೌತಮ್‌ ಅದಾನಿ ನೇತೃತ್ವದ ಸಮೂಹ ಸಂಸ್ಥೆಯ ವಿರುದ್ಧ ಹಲವು ಆರೋಪಗಳು ಕೇಳಿಬಂದ ಬೆನ್ನಲ್ಲೇ ಲೋಕಸಭೆಯಲ್ಲಿ ಮಂಗಳವಾರ “ಅದಾನಿ-ಪ್ರಧಾನಿ ಸ್ನೇಹ’ವನ್ನು ಪ್ರಸ್ತಾಪಿಸಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ಸಂಸತ್‌ನಲ್ಲಿ “ಅದಾನಿ -ಮೋದಿ ಮಿತ್ರತ್ವ’ದ ಕುರಿತು ರಾಹುಲ್‌ ಹಲವು ಪ್ರಶ್ನೆಗಳನ್ನು ಹಾಕುತ್ತಿದ್ದಂತೆಯೇ, ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ನಾಯಕರು, ರಾಹುಲ್‌ಗೆ ತಿರುಗೇಟು ನೀಡಿದರು. ಹೀಗಾಗಿ, ಮಂಗಳವಾರದ ಕಲಾಪವು “ರಾಹುಲ್‌ ವರ್ಸಸ್‌ ಬಿಜೆಪಿ’ಯಾಗಿ ಬದಲಾಯಿತು.

ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಂಗಳವಾರ ಮಾತನಾಡಿದ ರಾಹುಲ್‌, “ಪ್ರತಿಯೊಂದು ಕ್ಷೇತ್ರದಲ್ಲೂ ಅದಾನಿ ಸಾಮ್ರಾಜ್ಯಕ್ಕೆ ಪ್ರಧಾನಿ ಮೋದಿ ಅವರು ಬೆಂಬಲ ನೀಡುತ್ತಲೇ ಬಂದರು. ನಾನು ಭಾರತ್‌ ಜೋಡೋ ಯಾತ್ರೆ ನಡೆಸುತ್ತಿದ್ದಾಗ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಜನರು ಕೇಳಿದ್ದು ಇದನ್ನೇ- ಅದಾನಿ ಕಾಲಿಟ್ಟ ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸು ಸಾಧಿಸುತ್ತಿರುವುದು ಹೇಗೆ ಎಂದು. ಪ್ರಧಾನಿ ಮೋದಿ ಯಾವ ದೇಶಕ್ಕೆ ಭೇಟಿ ನೀಡಿ ವಾಪಸಾಗುತ್ತಾರೋ, ಆ ದೇಶದ ಗುತ್ತಿಗೆಗಳು ಅದಾನಿಗೆ ಸಿಗುತ್ತವೆ. ಅದಾನಿಗಾಗಿ ಹಲವು ನಿಯಮಗಳಿಗೆ ಮೋದಿ ತಿದ್ದುಪಡಿ ತಂದಿದ್ದಾರೆ’ ಎಂದು ಆರೋಪಿಸಿದರು.

ಜತೆಗೆ, ಪ್ರಧಾನಿ ಮೋದಿ ಮತ್ತು ಅದಾನಿ ಅವರ ಸ್ನೇಹಕ್ಕೆ ಪುಷ್ಟಿ ನೀಡುವಂಥ ಕೆಲವು ಫೋಟೋಗಳನ್ನೂ ರಾಹುಲ್‌ ಪ್ರದರ್ಶಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ, “ಈ ರೀತಿ ಫೋಟೋ ಪ್ರದರ್ಶಿಸುವುದು ಸರಿಯಲ್ಲ. ಎಲ್ಲರೂ ರಾಷ್ಟ್ರಪತಿ ಭಾಷಣದ ಕುರಿತು ಮಾತ್ರವೇ ಮಾತನಾಡಬೇಕು’ ಎಂದರು.

ಬಿಜೆಪಿ ತಿರುಗೇಟು:
ರಾಹುಲ್‌ ಹೇಳಿಕೆಯಿಂದ ಕೆಂಡಾಮಂಡಲರಾದ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು, ಸುಖಾಸುಮ್ಮನೆ ಆರೋಪಗಳನ್ನು ಮಾಡುವುದು ಬಿಟ್ಟು, ನಿಮ್ಮ ಆರೋಪಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಿ ಎಂದರು. “ನೀವೊಬ್ಬ ಹಿರಿಯ ಸಂಸದ. ಜವಾಬ್ದಾರಿಯುತವಾಗಿ ಮಾತನಾಡಿ. ಹೊರಗೆ ಏನು ಬೇಕಿದ್ದರೂ ಮಾತನಾಡಿ. ಆದರೆ, ಸಂಸತ್‌ನಲ್ಲಿ ಗಂಭೀರವಾಗಿರಿ’ ಎಂದೂ ಹೇಳಿದರು.

Advertisement

ಇದೇ ವೇಳೆ, ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗಲೇ ಖಾಸಗೀಕರಣ ಆರಂಭವಾಗಿದ್ದು. ಜಿವಿಕೆ ಕಂಪನಿಗೆ ಅನುಭವ ಇಲ್ಲದಿದ್ದರೂ ಆಗ ಏರ್‌ಪೋರ್ಟ್‌ ಗುತ್ತಿಗೆ ಕೊಟ್ಟಿದ್ದೇಕೆ ಎಂದು ಬಿಜೆಪಿ ಸಂಸದರು ಮರು ಪ್ರಶ್ನೆ ಹಾಕಿದರು. ರಾಜಸ್ಥಾನದ ಹೂಡಿಕೆ ಶೃಂಗದ ವೇಳೆ ಅದಾನಿ ಅವರು 65 ಸಾವಿರ ಕೋಟಿ ರೂ. ಹೂಡಿಕೆ ಘೋಷಿಸಿದ್ದನ್ನು ಪ್ರಸ್ತಾಪಿಸಿದ ಬಿಜೆಪಿ, “ರಾಹುಲ್‌ ಅವರು ಮೊದಲು ಅಶೋಕ್ ಗೆಹ್ಲೋಟ್-ಅದಾನಿ ಸ್ನೇಹದ ಬಗ್ಗೆ ಮಾತನಾಡಲಿ’ ಎಂದಿತು.

ರಾಹುಲ್‌ ಹೇಳಿದ್ದೇನು?
– ಅದಾನಿಗೆ ನೆರವಾಗಲೆಂದೇ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೆಲವು ನಿಯಮಗಳನ್ನೇ ತಿದ್ದುಪಡಿ ಮಾಡಿತು.
– ಏರ್‌ಪೋರ್ಟ್‌ ವಲಯದ ಅನುಭವವೇ ಇಲ್ಲದವರಿಗೆ ಹಿಂದೆಲ್ಲ ಅದರ ನಿರ್ವಹಣೆಯ ಗುತ್ತಿಗೆ ನೀಡುತ್ತಿರಲಿಲ್ಲ. ಈ ನಿಯಮಕ್ಕೂ ತಿದ್ದುಪಡಿ ತಂದ ಮೋದಿ ಸರ್ಕಾರ, ದೇಶದ 6 ಏರ್‌ಪೋರ್ಟ್‌ಗಳನ್ನು ಅದಾನಿಗೆ ನೀಡಿತು.
– 2014ರಿಂದ 2022ರ ಅಲ್ಪಾವಧಿಯಲ್ಲಿ ಅದಾನಿ ಸಂಪತ್ತು 8 ಶತಕೋಟಿ ಡಾಲರ್‌ನಿಂದ 140 ಶತಕೋಟಿ ಡಾಲರ್‌ಗೆರಿದ್ದು ಹೇಗೆ ಎಂದು ದೇಶದ ಜನ ಪ್ರಶ್ನಿಸುತ್ತಿದ್ದಾರೆ.
– ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ “ಜಾಗತಿಕ ಶ್ರೀಮಂತರ ಪಟ್ಟಿ’ಯಲ್ಲಿ 600ನೇ ಸ್ಥಾನದಲ್ಲಿದ್ದ ಅದಾನಿ ಅಷ್ಟು ಬೇಗ 2ನೇ ಸ್ಥಾನಕ್ಕೆ ಏರಲು ಹೇಗೆ ಸಾಧ್ಯವಾಯಿತು?

ಹಗರಣಗಳನ್ನು ನಡೆಸಿದ್ದೇ ಕಾಂಗ್ರೆಸ್‌: ರವಿಶಂಕರ್‌ ಪ್ರಸಾದ್‌
“ರಾಹುಲ್‌ ಅವರು ಪ್ರಧಾನಿ ಮೋದಿ ವಿರುದ್ಧ ಆಧಾರರಹಿತ, ನಾಚಿಕೆಗೇಡಿ ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ಬಿಜೆಪಿ ನಾಯಕ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ. ದೇಶದ ವರ್ಚಸ್ಸನ್ನು ಹಾಳು ಮಾಡಿರುವಂಥ ಎಲ್ಲ ದೊಡ್ಡ ದೊಡ್ಡ ಹಗರಣಗಳನ್ನು ನಡೆಸಿದ್ದೇ ಕಾಂಗ್ರೆಸ್‌ ಮತ್ತು ಅದರ ನಾಯಕರು. ರಾಹುಲ್‌ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಬರ್ಟ್‌ ವಾದ್ರಾ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ ಎನ್ನುವುದು ನೆನಪಿರಲಿ. ಭ್ರಷ್ಟಾಚಾರ ಮತ್ತು ಭ್ರಷ್ಟರ ರಕ್ಷಣೆ ಎಂಬ 2 ಕಂಬಗಳ ಮೇಲೆ ಕಾಂಗ್ರೆಸ್‌ ಪಕ್ಷ ನಿಂತಿದೆ ಎಂದೂ ಪ್ರಸಾದ್‌ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next