ವಯನಾಡ್: ಕಾಂಗ್ರೆಸ್ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಅವರು ರವಿವಾರ ತಮ್ಮ ಎರಡು ದಿನಗಳ ಭೇಟಿಗಾಗಿ ವಯನಾಡಿಗೆ ಆಗಮಿಸಿದ್ದಾರೆ. ಅತಿ ವೃಷ್ಠಿಯಿಂದ ಭಾರೀ ಪ್ರಮಾಣದ ಹಾನಿಗಳು ವಯನಾಡ್ ಸೇರಿದಂತೆ ಸುತ್ತ ಮುತ್ತಲಿನ ಜಿಲ್ಲೆಗಳಲ್ಲಿ ಸಂಭವಿಸಿದ್ದು, ತೀವ್ರ ಪ್ರವಾಹಕ್ಕೆ ವಯನಾಡ್ ಜಿಲ್ಲೆ ಸಾಕ್ಷಿಯಾಗಿದೆ.
ತಮ್ಮ ಭೇಟಿಯಲ್ಲಿ ಅವರು ಭಾರೀ ಭೂಕುಸಿತ ಸಂಭವಿಸಿದ ಜಿಲ್ಲೆಯ ಕೋಟಕಲ್, ಎಡವನ್ಪರ ಹಾಗೂ ಮಲಪುರಂ ಜಿಲ್ಲೆಯ ಕವಲಪ್ಪರ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಗೊಳಗಾದ ಪ್ರದೇಶಗಳನ್ನು ಸಮೀಕ್ಷೆ ಮಾಡಿ, ಜನರಿಗೆ ಆತ್ಮ ವಿಶ್ವಾಸ ತುಂಬಿದ್ದಾರೆ. ಕೋಟಕಲ್ನ ನೆರೆ ಆಶ್ರೀತರ ಕೇಂದ್ರಗಳಿಗೆ ಭೇಟಿ ನೀಡಿರುವ ರಾಹುಲ್ ಅಲ್ಲಿನ ಪರಿಸ್ಥಿತಿ ಅವಲೋಕನ ಮಾಡಿದ್ದಾರೆ. ರಾಹುಲ್ ಅವರಿಗೆ ಕಾಂಗ್ರೆಸ್ನ ಜನರಲ್ ಸೆಕ್ರೆಟರಿ ಕೆ.ಸಿ. ವೇಣುಗೋಪಾಲ್ ಸಾಥ್ ನೀಡಿದ್ದಾರೆ.
ಮಲಪುರಂ ಜಿಲ್ಲೆಯ ನೀಲಾಂಬೂರ್ ಜಿಲ್ಲೆಯಲ್ಲಿ ಗುಡ್ಡ ಕುಸಿದು ಸುಮಾರು 46 ಜನ ನೆಲ ಸಮಾದಿಯಾಗಿದ್ದಾರೆ. ಈ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ಆರೋಗ್ಯವನ್ನು ವಿಚಾರಿಸಿದ್ದಾರೆ. ಪ್ರವಾಹ ಪೀಡಿತರ ಜೀವನವನ್ನು ಯಥಾಸ್ಥಿಗೆ ಮರಳಿಸಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ. ಈಗಾಗಲೇ ಕೇರಳದ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ರಾಹುಲ್ ಹೇಳಿದ್ದಾರೆ. ತಮ್ಮ ಭೇಟಿಯ ಚಿತ್ರಗಳನ್ನು ಟ್ವೀಟರ್ ಮೂಲಕ ರಾಹುಲ್ ಗಾಂಧಿ ಅವರು ಹಂಚಿಕೊಂಡಿದ್ದಾರೆ.