ನವದೆಹಲಿ: ನಟೋರಿಯಸ್ ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಎನ್ ಕೌಂಟರ್ ವಿಚಾರದಲ್ಲಿ ಉತ್ತರಪ್ರದೇಶ ಸ್ಪೆಷಲ್ ಟಾಸ್ಕ್ ಫೋರ್ಸ್ (ಎಸ್ ಟಿಎಫ್) ನ ಅನುಮಾನಾಸ್ಪದ ನಡೆ ಬಗ್ಗೆ ವಿರೋಧ ಪಕ್ಷಗಳು ಆರೋಪಿಸಿದ್ದು, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡಾ ಶುಕ್ರವಾರ ಉತ್ತರಪ್ರದೇಶ ಸರ್ಕಾರಕ್ಕೆ ಟಾಂಗ್ ನೀಡಿದ್ದರು.
“ಹಲವು ಉತ್ತರಗಳಿಗಿಂತ ಮೌನವೇ ಹೆಚ್ಚು ಒಳ್ಳೆಯದು. ಎಷ್ಟು ಪ್ರಶ್ನೆಗಳು ಯಾರನ್ನು ರಕ್ಷಿಸಲಿದೆ” ಎಂಬುದು ಗೊತ್ತಿಲ್ಲ ಎಂದು ರಾಹುಲ್ ಗಾಂಧಿ ವಿಕಾಸ್ ದುಬೆ ಎನ್ ಕೌಂಟರ್ ಆಗಲಿ ಅಥವಾ ಮತ್ಯಾವುದೇ ವಿಷಯವನ್ನು ಸ್ಪಷ್ಟವಾಗಿ ಉಲ್ಲೇಖಿಸದೇ ಕಟುವಾಗಿ ಟ್ವೀಟ್ ಮಾಡಿರುವುದಾಗಿ ವರದಿ ತಿಳಿಸಿದೆ.
ಉತ್ತರಪ್ರದೇಶದ ಎಸ್ ಟಿಎಫ್ ತಂಡ ಶುಕ್ರವಾರ ಬೆಳಗ್ಗೆ ಮಧ್ಯಪ್ರದೇಶದ ಉಜ್ಜೈನ್ ನಿಂದ ಕಾನ್ಪುರಕ್ಕೆ ದುಬೆಯನ್ನು ಕರೆತರುತ್ತಿದ್ದ ಸಂದರ್ಭದಲ್ಲಿ ಕಾನ್ಪುರ್ ಟೋಲ್ ಪ್ಲಾಜಾ ಸಮೀಪ ವಾಹನ ಸ್ಕಿಡ್ ಆಗಿ ಬಿದ್ದಿತ್ತು. ಈ ಸಂದರ್ಭದಲ್ಲಿ ದುಬೆ ಪರಿಸ್ಥಿತಿಯ ಲಾಭ ಪಡೆದು ಪೊಲೀಸ್ ರೊಬ್ಬರ ಪಿಸ್ತೂಲ್ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದ, ಆಗ ಎಸ್ ಟಿಎಫ್ ಗುಂಡು ಹಾರಿಸಿರುವುದಾಗಿ ವರದಿ ವಿವರಿಸಿದೆ.
ವಿಕಾಸ್ ದುಬೆ ಎನ್ ಕೌಂಟರ್ ವಿರೋಧಪಕ್ಷಗಳ ಹಲವು ಮುಖಂಡರ ಹುಬ್ಬೇರಿಸುವಂತೆ ಮಾಡಿದ್ದು, ಈ ಘಟನೆ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ದುಬೆಯನ್ನು ಎನ್ ಕೌಂಟರ್ ಮಾಡುತ್ತಾರೆ ಎಂಬುದಾಗಿ ಹಲವರು ಭವಿಷ್ಯ ನುಡಿದಿದ್ದರು. ಒಂದು ವೇಳೆ ಆತ ಬದುಕಿದ್ದರೆ ರಾಜಕೀಯ ವ್ಯಕ್ತಿಗಳ ಜತೆಗಿನ ಸಂಪರ್ಕ ಬಯಲಾಗುತ್ತಿತ್ತು ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಆರೋಪಿಸಿದ್ದಾರೆ.
ಕಳೆದ ಮೂರು ದಶಕಗಳ ಕ್ರಿಮಿನಲ್ ಚಟುವಟಿಕೆಯಲ್ಲಿ ವಿಕಾಸ್ ದುಬೆ ವಿರುದ್ಧ ಕೊಲೆ, ಸುಲಿಗೆ ಸೇರಿದಂತೆ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಜುಲೈ 3ರಂದು ಕಾನ್ಪುರ್ ಬಿಕ್ರು ಗ್ರಾಮದಲ್ಲಿ ದುಬೆಯನ್ನು ಬಂಧಿಸಲು ಪೊಲೀಸ್ ಅಧಿಕಾರಿಗಳು ತೆರಳಿದ್ದ ವೇಳೆ ದುಬೆ ಹಾಗೂ ಸಹಚರರು ಗುಂಡಿನ ದಾಳಿ ನಡೆಸಿ ಎಂಟು ಮಂದಿ ಪೊಲೀಸರನ್ನು ಹತ್ಯೆಗೈದಿದ್ದರು.