Advertisement

ಗುಜರಾತ್‌ನಲ್ಲಿ ಭಾರತ್‌ ಜೋಡೋ ಯಾತ್ರೆ ಇಲ್ಲ? ಸಮಯದ ಮಿತಿಯೇ ಕಾರಣ

11:03 PM Aug 22, 2022 | Team Udayavani |

ಚೆನ್ನೈ/ನವದೆಹಲಿ: ಕಾಂಗ್ರೆಸ್‌ನ ಬಹುನಿರೀಕ್ಷಿತ “ಭಾರತ್‌ ಜೋಡೋ ಯಾತ್ರೆ’ ಗುಜರಾತ್‌ ಮೂಲಕ ಸಂಚರಿಸುವುದಿಲ್ಲ ಎಂದು ಹೇಳಲಾಗಿದೆ. ಸೆ.7ರಿಂದ ಕನ್ಯಾಕುಮಾರಿಯಿಂದ ಕಾಶ್ಮೀರ ವರೆಗೆ ಆರಂಭಿಸಲಾಗುವ 150 ದಿನಗಳ ಯಾತ್ರೆಗೆ ಸಮಯದ ಮಿತಿ ತೊಡಕಾಗಿದೆ. ಹೀಗಾಗಿ, ಗುಜರಾತ್‌ ಅನ್ನು ಯಾತ್ರೆಯಲ್ಲಿ ಸೇರಿಸಲು ಅಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಹಲವು ಬಾರಿ ಮಾರ್ಗಗಳ ಬಗ್ಗೆ ಬದಲಾವಣೆ, ಪರಿಷ್ಕರಣೆ ಮಾಡಿದರೂ ಗುಜರಾತ್‌ ಮೂಲಕ ಯಾತ್ರೆ ನಡೆಸುವ ಪ್ರಯತ್ನ ಸಾಧ್ಯವಾಗಲಿಲ್ಲ. ಈ ಬಗ್ಗೆ ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ ಸಿಂಗ್‌ ಕೂಡ ಹಲವು ರಾಜ್ಯಗಳ ಮೂಲಕ ಮಾರ್ಗಗಳನ್ನು ಸಿದ್ಧಪಡಿಸಿದ್ದರು. ಗುಜರಾತ್‌ ಅನ್ನು ಸೇರ್ಪಡೆಗೊಳಿಸಿದರೆ ಸದ್ಯ ನಿಗದಿಯಾಗಿರುವ ದಿನಗಳಿಗಿಂತ ಹೆಚ್ಚು ಬೇಕಾಗುತ್ತದೆ ಎಂದು ಕಾಂಗ್ರೆಸ್‌ನ ಹೆಸರು ಬಹಿರಂಗಪಡಿಸಲಿಚ್ಛಿಸದ ಮುಖಂಡರು ಹೇಳಿದ್ದಾರೆ.

ಮೊದಲ ಯಾತ್ರೆ:
ಸ್ವಾತಂತ್ರ್ಯ ಬಂದ ಬಳಿಕ ಕಾಂಗ್ರೆಸ್‌ ಕೈಗೊಳ್ಳುತ್ತಿರುವ ಮೊದಲ ಬೃಹತ್‌ ಪ್ರಮಾಣದ ದೇಶವ್ಯಾಪಿ ಪಾದಯಾತ್ರೆ ಇದಾಗಿದೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಆದರೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

ಯಾತ್ರೆಯನ್ನು ಯಶಸ್ಸುಗೊಳಿಸುವ ನಿಟ್ಟಿನಲ್ಲಿ “ಟೀನ್‌ ಬಂದರ್‌’ ಎಂಬ ಸಂಸ್ಥೆಯ ಜತೆಗೆ ಮಾತುಕತೆಯನ್ನೂ ಕಾಂಗ್ರೆಸ್‌ ನಡೆಸುತ್ತಿದೆ. ಅದರ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಪ್ರಚಾರಕ್ಕೆ ತೀರ್ಮಾನಿಸಲಾಗುತ್ತಿದೆ. ಯಾತ್ರೆಗೆ ಮುನ್ನ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಕನ್ಯಾಕುಮಾರಿಯಲ್ಲಿನ ವಿವೇಕಾನಂದ ಸ್ಮಾರಕಕ್ಕೆ ಭೇಟಿ ನೀಡಬೇಕು ಎಂದೂ ಸಲಹೆ ನೀಡಿದ್ದಾರೆ. ಈ ಮೂಲಕ ಬಿಜೆಪಿಗೆ ತಕ್ಕ ಉತ್ತರವನ್ನೂ ನೀಡಿದಂತಾಗುತ್ತದೆ ಎಂದೂ ಹೆಸರು ಬಹಿರಂಗಪಡಿಸಲಿಚ್ಛಿಸದ ಮುಖಂಡರೊಬ್ಬರು ತಿಳಿಸಿದ್ದಾರೆ.

2024ರ ಲೋಕಸಭೆ ಚುನಾವಣೆ ಮತ್ತು ವರ್ಷಾಂತ್ಯದಲ್ಲಿ, 2023ರಲ್ಲಿ ಹಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ರಾಜಕೀಯವಾಗಿ ಈ ಯಾತ್ರೆ ಮಹತ್ವಪಡೆದಿದೆ.

Advertisement

ಗಣ್ಯರ ಜತೆಗೆ ಭೇಟಿ:
ಯಾತ್ರೆಗೆ ಪೂರಕವಾಗಿ ನವದೆಹಲಿಯಲ್ಲಿ ವಯನಾಡ್‌ ಸಂಸದ ರಾಹುಲ್‌ ಗಾಂಧಿ ಸಮಾಜದ ವಿವಿಧ ವರ್ಗದ ಮುಖಂಡರನ್ನು ನವದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್‌ ಮುಖಂಡರಾದ ದಿಗ್ವಿಜಯ ಸಿಂಗ್‌, ಜೈರಾಮ್‌ ರಮೇಶ್‌, ಸಾಮಾಜಿಕ ಹೋರಾಟಗಾರ ಯೋಗೇಂದ್ರ ಯಾದವ್‌ ಸೇರಿದಂತೆ ಹಲವರು ನವದೆಹಲಿಯ ಕಾನ್‌ಸ್ಟಿಟ್ಯೂಷನಲ್‌ ಕ್ಲಬ್‌ನಲ್ಲಿ ಭೇಟಿಯಾಗಿ ವಿಚಾರ ವಿನಿಮಯ ನಡೆಸಿದ್ದಾರೆ.

ಶ್ರೀಪೆರಂಬದೂರ್‌ಗೆ ರಾಹುಲ್‌ ಭೇಟಿ
ಯಾತ್ರೆ ಆರಂಭಕ್ಕೆ ಮುನ್ನ ಸೆ.7ರಂದು ತಮಿಳುನಾಡಿನ ಶ್ರೀಪೆರಂಬದೂರ್‌ಗೆ ಭೇಟಿ ನೀಡಲಿದ್ದಾರೆ. ಆ ದಿನ ತಂದೆ ರಾಜೀವ್‌ ಗಾಂಧಿ 1991ರಲ್ಲಿ ಹತ್ಯೆಗೀಡಾದ ಸ್ಥಳದಲ್ಲಿ ಸ್ಥಾಪನೆಗೊಂಡಿರುವ ಸ್ಮಾರಕದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ತಮಿಳುನಾಡು ಕಾಂಗ್ರೆಸ್‌ ಶಾಸಕ ಕೆ.ಸೆಲ್ವಪೆರುನಾಥಗೈ ಹೇಳಿದ್ದಾರೆ.

“ರಾಹುಲ್‌ ಗಾಂಧಿಯವರು ಆ ದಿನ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಅಲ್ಲಿ ಧ್ಯಾನ ನಡೆಸಲಿದ್ದಾರೆ. ಯಾತ್ರೆಯ ಯಶಸ್ಸಿಗಾಗಿ ತಂದೆಯ ಆಶೀರ್ವಾದವನ್ನು ಈ ಸಂದರ್ಭದಲ್ಲಿ ಪಡೆಯಲಿದ್ದಾರೆ. ಹೀಗಾಗಿ, ಭದ್ರತೆಯ ಉಸ್ತುವಾರಿ ಹೊತ್ತಿರುವ ಅಧಿಕಾರಿಗಳು ಶೀಘ್ರವೇ ಶ್ರೀಪೆರಂಬದೂರ್‌ಗೆ ಭೇಟಿ ನೀಡಲಿದ್ದಾರೆ’ ಎಂದು ಹೇಳಿದ್ದಾರೆ. ತಮಿಳುನಾಡಿನಲ್ಲಿ ಸೆ.7ರಿಂದ ಸೆ.10ರ ವರೆಗೆ ಯಾತ್ರೆ ಸಂಚರಿಸಲಿದೆ. ನಂತರ ಅದು ಕೇರಳಕ್ಕೆ ಪ್ರವೇಶಿಸಲಿದೆ.

ಯಾತ್ರೆಯ ಬಗ್ಗೆ
150- ಇಷ್ಟು ದಿನ
12- ರಾಜ್ಯಗಳ ಮೂಲಕ
3,500 ಕಿಮೀ- ಕ್ರಮಿಸಲಿರುವ ದೂರ

 

Advertisement

Udayavani is now on Telegram. Click here to join our channel and stay updated with the latest news.

Next