ಬೆಂಗಳೂರು: ರಫೇಲ್ ಯುದ್ಧ ವಿಮಾನ ಖರೀದಿ ಅವ್ಯವಹಾರದ ಬಗ್ಗೆ ಕೇಂದ್ರದ ವಿರುದ್ಧ ವಿರೋಧ ವ್ಯಕ್ತಪಡಿಸುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಎಚ್‌ಎಎಲ್ ಬಗ್ಗೆ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ನೀಡಿರುವ ವಿವಾದಾತ್ಮಕ ಹೇಳಿಕೆಯನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎಚ್‌ಎಎಲ್ ನೌಕರರೊಂದಿಗೆ ಕಬನ್ ಪಾರ್ಕ್ ಮಿನ್ಸ್ ಸ್ಕ್ವೇರ್ ಬಳಿ
ದೇಶದ ರಕ್ಷಣಾ ವ್ಯವಸ್ಥೆಗೆ ಎಚ್ ಎಎಲ್ ಕೊಡುಗೆ ಏನು ಎಂಬ ವಿಷಯದ ಮೇಲೆ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸುಮಾರು ನೂರು ಜನ ಎಚ್‌ಎಎಲ್ ಸಿಬ್ಬಂದಿ ಜೊತೆಗೆ ಸಂವಾದ ನಡೆಸಲಿದ್ದಾರೆ.
ರಫೇಲ್ ಯುದ್ಧ ವಿಮಾನ ಖರೀದಿ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸುತ್ತಿದ್ದು, ಎಚ್‌ಎಎಲ್‌ಗೆ ದೊರೆಯಬೇಕಿದ್ಧ ರಫೇಲ್ ಉತ್ಪಾದನಾ ಟೆಂಡರ್
ರದ್ದು ಪಡಿಸಿ ಈಗಿನ ಎನ್‌ಡಿಎ ಸರ್ಕಾರ ಯುದ್ಧ ವಿಮಾನ ತಯಾರಿಕೆಯಲ್ಲಿ ಯಾವುದೇ ಅನುಭವ ಇಲ್ಲದ ರಿಲಯನ್ಸ್ ಕಂಪನಿಗೆ ನೀಡಿದೆ. ಈ ಒಪ್ಪಂದದಲ್ಲಿ ಸಾವಿರಾರು ಕೋಟಿ ರೂ. ಅವ್ಯವಹಾರವಾಗಿದ್ದು, ಇದರಲ್ಲಿ ಸ್ವತಃ ಪ್ರಧಾನಿ ಮೋದಿ ಭಾಗಿಯಾಗಿದ್ದಾರೆ. ಈ ಬಗ್ಗೆ ಜಂಟಿ ಸದನ ಸಮಿತಿ ರಚನೆಯಾಗಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.
ಬೆಂಗಳೂರಿನ ಎಚ್‌ಎಎಲ್‌ಗೆ ರಫೇಲ್ ಯುದ್ಧ ವಿಮಾನ ತಯಾರಿಸುವ ಸಾಮರ್ಥ್ಯ ಇಲ್ಲ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿರುವುದರಿಂದ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ಗೆ ಕೇಂದ್ರ ಸರ್ಕಾರ ಅವಮಾನ ಮಾಡಿದೆ ಎಂಬ ವಿಷಯದ ಕುರಿತು ರಾಹುಲ್ ಗಾಂಧಿ ಎಚ್‌ಎಎಲ್ ನೌಕರರ ಜೊತೆ ಸಂವಾದ ನಡೆಸಲಿದ್ದಾರೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್ ಕಾರ್ಯಕ್ರಮ ಪೂರ್ವ ಸಿದ್ಧತೆ ಮಾಡಿಕೊಂಡಿದ್ದು, ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್ ಶಂಕರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಹುಲ್ ಗಾಂಧಿ ಸಂವಾದ ಕಾರ್ಯಕ್ರಮದಲ್ಲಿ ಎಚ್‌ಎಎಲ್ ಹಾಲಿ ಹಾಗೂ ನಿವೃತ್ತ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ. ದೇಶದ ರಕ್ಷಣಾ ವ್ಯವಸ್ಥೆಗೆ ಎಚ್‌ಎಎಲ್ ಕೊಡುಗೆಯ ಬಗ್ಗೆ ರಾಹುಲ್ ಗಾಂಧಿ ಮಾತನಾಡಲಿದ್ದಾರೆ ಎಂದು ಹೇಳಿದರು.
ಎಚ್‌ಎಎಲ್ ನಿವೃತ್ತ ಅಧಿಕಾರಿ ಅನಂತ ಪದ್ಮನಾಭ ಮಾತನಾಡಿ, ಎಲ್ಲ ಯುದ್ಧ ವಿಮಾನಗಳನ್ನು ಎಚ್ ಎಎಲ್ ನಿರ್ಮಾಣ ಮಾಡುತ್ತದೆ. ಎಷ್ಟು ಲಕ್ಷ ಕೊಟ್ಟರೂ ಇಂತಹ ಸಂಸ್ಥೆ ಕಟ್ಟಲು ಆಗುವುದಿಲ್ಲ. ಹೆಲಿಕ್ಯಾಪ್ಟರ್ ನಿರ್ಮಾಣದಲ್ಲಿ ಎಚ್‌ಎಎಲ್ ವಿಶ್ವದಲ್ಲಿಯೇ 6ನೇ ಸ್ಥಾನದಲ್ಲಿದೆ. ಏರೋಸ್ಪೇಸ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ರಫೇಲ್ ಯುದ್ಧ ವಿಮಾನ ನಿರ್ಮಿಸುವ ಸಾಮರ್ಥ್ಯ ಎಚ್‌ಎಎಲ್‌ಗಿದೆ. ಕೇಂದ್ರ ರಕ್ಷಣಾ ಸಚಿವರಿಗೆ ಯಾವುದೇ ಮಾಹಿತಿ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಇದುವರೆಗೂ ನಮ್ಮ ಸಂಸ್ಥೆಗೆ ಭೇಟಿ ನೀಡಿಲ್ಲ ಎಂದರು.
ಈ ಸಂವಾದ ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯವಿಲ್ಲ. 1940 ರಲ್ಲಿ ಬೆಂಗಳೂರಿನಲ್ಲಿ ಎಚ್ ಎಎಲ್ ಸ್ಥಾಪನೆಯಾದಾಗಿನಿಂದಲೇ ಬೆಂಗಳೂರು
ಬೆಳವಣಿಗೆಗೆ ಚಾಲನೆ ಸಿಕ್ಕಿದೆ. ಈ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಮನವಿ ಮಾಡಿದ್ದೆವು. ಅವರು ಬರಲು ಒಪ್ಪಿಕೊಂಡಿದ್ದಾರೆ. ಸಮಸ್ಯೆಯಾದಾಗ ಸರ್ಕಾರದ ಬಳಿ ಹೋಗಿದ್ದೆವು ಸರ್ಕಾರ ನಮ್ಮ ಮನವಿಗೆ ಸ್ಪಂದಿಸಲಿಲ್ಲ. ಹೀಗಾಗಿ ಪ್ರತಿಪಕ್ಷದ ಬಳಿ ತೆರಳಿ ನಮ್ಮ ಸಮಸ್ಯೆ ಹೇಳಿಕೊಂಡಿದ್ದೇವೆ ಎಂದು ಹೇಳಿದರು.
ರಾಹುಲ್ ಆಗಮನ
1.55 : ಮಧ್ಯಾಹ್ನ ವಿಮಾನ ನಿಲ್ದಾಣಕ್ಕೆ ಆಗಮನ
2.30 : ಕುಮಾರಕೃಪಾ ಗೆಸ್ಟ್ ಹೌಸ್ (ರಾಜ್ಯ ನಾಯಕರೊಂದಿಗೆ ಸಭೆ)
3.30 : ಎಚ್‌ಎಎಲ್ ನೌಕರೊಂದಿಗೆ ಸಂವಾದ (ಮಿನ್ಸ್‌ಸ್ಕ್ವೇರ್)
6.00 : ದೆಹಲಿಗೆ ವಾಪಸ್