ಪಟ್ನಾ : ‘ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಯಾರಾದರೂ ಕೆಣಕಿದರೆ ಜೋಕೆ’ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ ಮಾತ್ರವಲ್ಲ ‘ನಿತೀಶ್ ಅವರನ್ನು ಗುರಿ ಇರಿಸಿ ಟೀಕಾ ಪ್ರಹಾರ ಮಾಡುವವರ ವಿರುದ್ಧ ಕಠಿನ ಕ್ರಮತೆಗೆದುಕೊಳ್ಳಲಾಗುವುದು’ ಎಂದು ಖಡಕ್ ಆಗಿ ನುಡಿದಿದ್ದಾರೆ.
ಬಿಜೆಪಿ ನೇತೃತ್ವದ ಎನ್‌ಡಿಎ ಈಚೆಗೆ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಹುದ್ದೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿ ಬೆಂಬಲ ಕೋರಿದ್ದಾಗ ನಿತೀಶ್ ಕುಮಾರ್ ಅವರು ತಮ್ಮ ಮಹಾ ಘಟಬಂಧನದ ಯಾವುದೇ ಮಿತ್ರ ಪಕ್ಷಗಳನ್ನು ಸಂಪರ್ಕಿಸದೆ, ನೇರವಾಗಿ ತಮ್ಮ ಬೆಂಬಲವನ್ನು ಸೂಚಿಸಿದ್ದರು.
ನಿತೀಶ್ ಅವರ ಈ ಏಕಪಕ್ಷೀಯ ನಿಲುವನ್ನು ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬೀ ಆಜಾದ್ ಅವರು ತೀವ್ರವಾಗಿ ಟೀಕಿಸಿದ್ದರು. ಇದರಿಂದಾಗಿ ನಿತೀಶ್ ತೀವ್ರವಾಗಿ ನೊಂದಿದ್ದರು. ಪರಿಣಾಮವಾಗಿ ಬಿಹಾರದ ಮಹಾಘಟಬಂಧನದಲ್ಲಿ ಬಿರುಕು ಕಾಣಿಸಿಕೊಂಡಿತ್ತು.
ಬಿಹಾರ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಚೌಧರಿ ಅವರು ಈ ಬೆಳವಣಿಗೆ ಕುರಿತಾಗಿ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದರು. ಆದರೆ ರಾಹುಲ್ ಜತೆಗಿನ ಮಾತುಕತೆಗಳ ವಿವರಗಳನ್ನು ಅವರು ನೀಡಿರಲಿಲ್ಲ.
ಚೌಧರಿ ಜತೆಗಿನ ಮಾತುಕತೆಯಲ್ಲಿ “ನಿತೀಶ್ ಕುಮಾರ್ ವಿರುದ್ಧ ಟೀಕಾ ಪ್ರಹಾರ ಮಾಡುವ ಯಾವುದೇ ಕಾಂಗ್ರೆಸ್ ನಾಯಕರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಾಗುವುದೆಂದು ರಾಹುಲ್ ಹೇಳಿದ್ದರು’ ಎಂಬುದಾಗಿ ಈಗ ಗೊತ್ತಾಗಿದೆ.
ಕಾಂಗ್ರೆಸ್ ಪಕ್ಷ ತೋರಿರಿರುವ ಈ ಸಕಾರಾತ್ಮಕ ಕ್ರಮವನ್ನು ಸ್ವಾಗತಿಸಿರುವ ಜೆಡಿಯು ಈಗಿನ್ನು ಆಗಸ್ಟ್‌ನಲ್ಲಿ ನಡೆಯಲಿರುವ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳನ್ನು ಬೆಂಬಲಿಸುವುದಾಗಿ ಹೇಳಿದೆ.