ಹೊಸದಿಲ್ಲಿ : “ಜಿಎಸ್‌ಟಿ ಯನ್ನು ಅದಕ್ಷ, ಅಸಮರ್ಥ ಮತ್ತು ಸಂವೇದನೆಯೇ ಇಲ್ಲದ ಸರಕಾರ ಅನುಷ್ಠಾನಿಸುತ್ತಿದೆ’ ಹೇಳುವ ಮೂಲಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.
“ಜಿಎಸ್‌ಟಿ ಎನ್ನುವುದು ನೋಟು ಅಪನಗದೀಕರಣದಹಾಗಲ್ಲ; ಇದೊಂದು ಆರ್ಥಿಕ ಸುಧಾರಣಾ ಕ್ರಮ. ಕಾಂಗ್ರೆಸ್ ಇದನ್ನು ವಿಶಿಷ್ಟವಾಗಿ ರೂಪಿಸಿ ಬೆಂಬಲಿಸಿತ್ತು. ಆದರೆ ನೋಟು ಅಪನಗದೀಕರಣವನ್ನು ಯದ್ವಾತದ್ವಾ ಜಾರಿಗೆ ತಂದ ಹಾಗೆ ಕೇಂದ್ರ ಸರಕಾರ ಈಗ ಜಿಎಸ್‌ಟಿಯನ್ನು ಕೂಡ ಯಾವುದೇ ಸರಿಯಾದ ಮುನ್ನೋಟ ಇಲ್ಲದೆ ಜಾರಿಗೆ ತರುತ್ತಿದೆ’ ಎಂದು ರಾಹುಲ್ ಗಾಂಧಿ ಹೇಳಿದರು.
ಜಿಎಸ್‌ಟಿ ಅನುಷ್ಠಾನಾರ್ಥವಾಗಿ ಕೇಂದ್ರ ಸರಕಾರ ಅದ್ದೂರಿಯ, ಮಧ್ಯರಾತ್ರಿಯ ಸಂಸತ್ ಅಧಿವೇಶನ ಏರ್ಪಡಿಸಿರುವುದನ್ನು ಕೂಡ ರಾಹುಲ್ ಗಾಂಧಿ ಟೀಕಿಸಿದರು.
ಇದಕ್ಕೆ ಮುನ್ನ ಇಂದು ಬೆಳಗ್ಗೆ ಕಾಂಗ್ರೆಸ್, ಈ ಹಿಂದೆ ಎಂದೋ ನರೇಂದ್ರ ಮೋದಿ ಅವರು “ಜಿಎಸ್‌ಟಿ ಎಂದೂ ಯಶಸ್ವಿಯಾಗುವುದಿಲ್ಲ; ಆವಶ್ಯಕ ಮೂಲ ಸೌಕರ್ಯವಿಲ್ಲದೆ ಅದರ ಅನುಷ್ಠಾನ ಅಸಾಧ್ಯ’ ಎಂದು ಹೇಳಿರುವ ದಿನಾಂಕ ನಮೂದಿಸಲ್ಪಡದ ಟ್ವೀಟ್‌ಗಳನ್ನು ಪೋಸ್ಟ್ ಮಾಡಿತ್ತು.