ಹೊಸದಿಲ್ಲಿ : ‘ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹತ್ಯೆಯ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇದೆ’ ಎಂದು ಹೇಳಿದ್ದ ಕಾರಣಕ್ಕೆ ಆರ್‌ಎಸ್‌ಎಸ್ ಕಾರ್ಯಕರ್ತ ರಾಜೇಶ್ ಕುಂಠೆ ದಾಖಲಿಸಿದ್ದ ಮಾನನಷ್ಟ ದಾವೆ ಸಂಬಂಧವಾಗಿ ಇಂದು ಮಹಾರಾಷ್ಟ್ರದ ಭಿವಂಡಿ ನ್ಯಾಯಾಲಯದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಜರಾಗಿ ‘ನಾನು ಯಾವುದೇ ತಪ್ಪೆಸಗಿಲ್ಲ’ ಎಂದು ಹೇಳಿದರು.
ದಾವೆಗೆ ಸಂಬಂಧಿಸಿದ ವಿಚಾರಣೆಯನ್ನು ಆರಂಭಿಸುವುದಕ್ಕೆ ಮುನ್ನ ನ್ಯಾಯಾಲಯ ರಾಹುಲ್ ವಿರುದ್ಧ ಐಪಿಸಿ ಸೆಕ್ಷನ್ 499 ಮತ್ತು 500ರ ಪ್ರಕಾರ ದೋಷಾರೋಪ ಹೊರಿಸುವುದಕ್ಕೆ ಆದೇಶ ನೀಡಿತು.
ರಾಹುಲ್ ಗಾಂಧಿ ಅವರಿಂದು ಬೆಳಗ್ಗೆ ಮುಂಬಯಿಗೆ ಆಗಮಿಸಿ ಅಲ್ಲಿಂದ ಭಿವಂಡಿಗೆ ಬಂದು ಕೋರ್ಟಿಗೆ ಹಾಜರಾದರು.
ರಾಹುಲ್ ಗಾಂಧಿ ಕಳೆದ ತಿಂಗಳಲ್ಲಿ ಕೋರ್ಟಿಗೆ ಹಾಜರಾಗುವಲ್ಲಿ ವಿಫಲರಾಗಿದ್ದರು. ಅವರಿಗೆ ವೈಯಕ್ತಿಕ ಹಾಜರಾತಿಯಿಂದ ಕೋರ್ಟ್ ವಿನಾಯಿತಿ ನೀಡುವಂತೆ ಅವರ ವಕೀಲರು ಮನವಿ ಮಾಡಿಕೊಂಡಿದ್ದರು.
ಭಿವಂಡಿ ನ್ಯಾಯಾಲಯ ಈ ವರ್ಷ ಜನವರಿ 17ರಂದೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಈ ಮಾನನಷ್ಟ ದಾವೆಗೆ ಸಂಬಂಧಿಸಿ ತನ್ನ ಮುಂದೆ ಹಾಜರಾಗುವಂತೆ ಆದೇಶಿಸಿತ್ತು.