ಮುಂಬಯಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಚುನಾವಣಾ ಸಭೆಯೊಂದರಲ್ಲಿ ಮಾಜೀ ಪ್ರಧಾನಿ ದಿವಂಗತ ರಾಜೀವ ಗಾಂಧಿ ಅವರನ್ನು ‘ಭ್ರಷ್ಟಾಚಾರಿ ನಂ.1’ ಎಂದು ಟೀಕಿಸಿರುವುದರ ವಿರುದ್ಧ ರಾಜಕೀಯ ವಲಯದಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಭಾರತೀಯ ಜನತಾ ಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗದ (NDA) ಪ್ರಮುಖ ಅಂಗ ಪಕ್ಷವಾದ ಶಿವಸೇನೆ ಇದೀಗ ಪ್ರಧಾನಿ ಅವರ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ ಮಾತ್ರವಲ್ಲದೇ ಈ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮೇಲೆ ತನ್ನ ಟೀಕಾ ಪ್ರಹಾರವನ್ನು ಮುಂದುವರೆಸಿದೆ.
ತನ್ನ ಪಕ್ಷದ ಮುಖವಾಣಿ ಆಗಿರುವ ಸಾಮ್ನಾದ ಸಂಪಾದಕೀಯದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದು, ರಾಹುಲ್ ಗಾಂಧಿ ಅವರು ಸಾರ್ವಜನಿಕವಾಗಿ ಸಾವರ್ಕರ್ ಅವರನ್ನು ಟೀಕಿಸಿದ್ದರ ಪರಿಣಾಮವೇ ಇದು ಎಂದು ಅದರಲ್ಲಿ ಬರೆಯಲಾಗಿದೆ.
ರಾಹುಲ್ ಗಾಂಧಿ ಅವರು ತನ್ನ ಸಾರ್ವಜನಿಕ ಸಭೆಗಳಲ್ಲಿ ಪ್ರಧಾನ ಮಂತ್ರಿಯನ್ನು ‘ಕಳ್ಳ’ ಎಂದು ಕರೆಯುತ್ತಾರೆ ಇದೂ ಸಾಲದೆಂಬಂತೆ ಅವರು ಸಾರ್ವಜನಿಕವಾಗಿ ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ ಅವರನ್ನು ಅವಮಾನಿಸುತ್ತಿರುತ್ತಾರೆ. ತನ್ನ ಈ ಎಲ್ಲಾ ವರ್ತನೆಗಳಿಗೆ ರಾಹುಲ್ ಇದೀಗ ‘ತಕ್ಕ ಬೆಲೆ’ ತೆರುತ್ತಿದ್ದಾರೆ ಎಂದು ಸಾಮ್ನಾ ತನ್ನ ಸಂಪಾದಕೀಯದಲ್ಲಿ ಅಭಿಪ್ರಾಯಪಟ್ಟಿದೆ.
‘ರಾಹುಲ್ ಅವರು ತಮ್ಮ ಭಾಷಣಗಳಲ್ಲಿ ಪ್ರಧಾನಿ ಮೋದಿಯವರನ್ನು ‘ಕಳ್ಳ’ ಎಂದು ಕರೆದಿದ್ದಕ್ಕೆ ಮೋದಿ ಅವರು ರಾಹುಲ್ ಅವರನ್ನು ಕರೆದು ಚಹಾ ನೀಡಬೆಕೆಂದು ಯಾರಾದರೂ ಅಪೇಕ್ಷಿಸುತ್ತಾರೆಯೇ? ಹೌದು, ಒಂದು ವೇಳೆ ರಾಜೀವ್ ಗಾಂಧಿ ಅವರನ್ನು ಪ್ರಧಾನಿ ಅವರು ಟೀಕಿಸಿರುವುದು ತಪ್ಪೆಂದೇ ಅಂದುಕೊಳ್ಳೋಣ ಆದರೆ ರಾಹುಲ್ ಅವರು ವೀರ ಸಾವರ್ಕರ್ ಅವರ ಬಗ್ಗೆ ಸಾರ್ವಜನಿಕವಾಗಿ ಕೀಳಾಗಿ ಮಾತನಾಡುವುದು ಅವೆಲ್ಲದಕ್ಕಿಂತಲೂ ದೊಡ್ಡ ತಪ್ಪು’ ಎಂದು ಸಾಮ್ನಾ ಸಂಪಾದಕೀಯದಲ್ಲಿ ಬರೆಯಲಾಗಿದೆ.
ರಾಹುಲ್ ಗಾಂಧಿ ಅವರು ವೀರ ಸಾವರ್ಕರ್ ಅವರ ಕುರಿತಾಗಿ ಮಾಡಿರುವ ಗೇಲಿ ಹಾಗೂ ಸಾವರ್ಕರ್ ಅವರು ಬ್ರಿಟಿಷರಿಗೆ ಶರಣಾಗಿ ಬಂಧಮುಕ್ತರಾದರು ಎಂದು ಅವರನ್ನು ರಾಹುಲ್ ವಿಶ್ಲೇಷಿಸಿದ ರೀತಿ ದೇಶದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ ಎಂದು ಸಾಮ್ನಾ ಖಾರವಾಗಿ ಅಭಿಪ್ರಾಯಪಟ್ಟಿದೆ.