ಜಮ್ಮು- ಕಾಶ್ಮೀರ: 4,080 ಕಿಮೀಗಳ ಭಾರತ್ ಜೋಡೋ ಯಾತ್ರೆಯು ಯಶಸ್ವಿ ಮುಕ್ತಾಯ ಕಂಡ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಲಿಡೇ ಮೂಡ್‌ಗೆ ಜಾರಿದ್ದಾರೆ. ಯಾತ್ರೆಯ ಬಳಿಕ ಸದನದಲ್ಲಿ ಕಾಣಿಸಿಕೊಂಡಿದ್ದ ರಾಹುಲ್ ಇದೀಗ ಜಮ್ಮು ಮತ್ತು ಕಾಶ್ಮೀರದ ಗುಲ್‌ಮಾರ್ಗ್‌ನ ಪ್ರಸಿದ್ಧ ಸ್ಕೀಯಿಂಗ್ ಜಾಗಕ್ಕೆ ತೆರಳಿದ್ದಾರೆ.
ಕಣಿವೆ ನಾಡಿನಲ್ಲಿ ಎರಡು ದಿನದ ಪ್ರವಾಸದಲ್ಲಿರುವ ಕಾಂಗ್ರೆಸ್ ಸಂಸದನ ವಿಡಿಯೋಗಳು ಟ್ವಿಟರ್‌ನಲ್ಲಿ ಹರಿದಾಡುತ್ತಿದೆ. ಇದರಲ್ಲಿ ಅವರು ಹಿಮಾಚ್ಛಾದಿತ ಉತ್ತರ ಕಾಶ್ಮೀರದ ಗುಲ್‌ಮಾರ್ಗ್ ಪ್ರದೇಶದಲ್ಲಿ ಇರುವ ಬಗ್ಗೆ ಹೇಳಲಾಗಿದೆ.
“ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿ ಕೊನೆಗೊಂಡ ಬಳಿಕ ರಾಹುಲ್ ಗಾಂಧಿ ಅವರು ತಮಗೆ ತಾವೇ ಉತ್ತಮ ಉಡುಗೊರೆಯನ್ನು ಆಯ್ದುಕೊಂಡಿದ್ದಾರೆ. ಅವರು ಕಾಶ್ಮೀರದ ಗುಲ್‌ಮಾರ್ಗ್‌ನಲ್ಲಿ ತಮ್ಮ ರಜೆಯನ್ನು ಕಳೆಯುತ್ತಿದ್ದಾರೆ” ಎಂದು ವ್ಯಕ್ತಿಯೊಬ್ಬರು ಟ್ವಿಟರ್‌ನಲ್ಲಿ ರಾಹುಲ್ ಗಾಂಧಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಫೆ. 15 ರಂದು ರಾಹುಲ್ ಗುಲ್‌ಮಾರ್ಗ್‌ಗೆ ತೆರಳುವೆ ದಾರಿ ಮಧ್ಯೆ ಕೊಂಚ ಹೊತ್ತು ಗಾಡಿ ನಿಲ್ಲಿಸಿದ್ದಾಗ ಯಾರೋ ಅವರ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿತ್ತು.
ಜಾಲಿ ಮೂಡ್‌ನಲ್ಲಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಲು ಮನ ಮಾಡಲಿಲ್ಲ. ಕೇವಲ ʻನಮಸ್ಕಾರʼ ಎನ್ನುವ ಮೂಲಕ ಪ್ರಶ್ನೆಗಳಿಗೆ ಉತ್ತರಿಸದೆ ತೆರಳಿದ್ರು. ಅಷ್ಟೇ ಅಲ್ಲದೇ ಅಲ್ಲಿ ನೆರೆದಿದ್ದ ಪ್ರವಾಸಿಗರಿಗೆ ಸೆಲ್ಫಿಗೆ ಫೋಸ್ ಕೊಡುವ ಮೂಲಕ ಎಂಜಾಯ್ ಮಾಡಿದ್ದಾರೆ.