ಲಂಡನ್: “ಭಾರತ ಒಂದು ರಾಷ್ಟ್ರವೇ ಅಲ್ಲ, ಅದು ವಿವಿಧ ರಾಜ್ಯ ಸರಕಾರಗಳಿರುವ ಒಕ್ಕೂಟ ವ್ಯವಸ್ಥೆ’ ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯವರನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಪಬ್ಲಿಕ್ ಪೊಲೀಸ್ ವಿಭಾಗದಲ್ಲಿ ವಿದ್ವಾಂಸರಾಗಿರುವ ಭಾರತದ ರೈಲ್ವೇ ಇಲಾಖೆ ಅಧಿಕಾರಿ ಸಿದ್ದಾರ್ಥ ವರ್ಮಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:ಕರಣ್ ಜೋಹರ್ ಪಾರ್ಟಿಯಲ್ಲಿ ತನ್ನ ಹೊಸ ಗರ್ಲ್ ಫ್ರೆಂಡ್ ಪರಿಚಯಿಸಿದ ಹೃತಿಕ್ ರೋಶನ್
ಕೇಂಬ್ರಿಡ್ಜ್ ವಿವಿಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ತಜ್ಞರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಹುಲ್, ಭಾರತ ಒಂದು ರಾಷ್ಟ್ರವಲ್ಲ. ಭಾರತೀಯ ಸಂವಿಧಾನದ ಮೊದಲ ಪರಿಚ್ಛೇದದಲ್ಲೇ ಇದು ಉಲ್ಲೇಖೀಸಲಾಗಿದೆ ಎಂದಿದ್ದರು.
ಸಭಿಕರ ಮಧ್ಯೆ ಕುಳಿತಿದ್ದ ಸಿದ್ದಾರ್ಥ ವರ್ಮಾ ಅವರು ಎದ್ದು ನಿಂತು ರಾಹುಲ್ ಅವರ ಜತೆಗೆ ಸಂವಾದಕ್ಕಿಳಿದರು. “ನೀವು ಸಂವಿಧಾನದ 1ನೇ ಪರಿಚ್ಛೇದದಲ್ಲಿ ಭಾರತವು ಒಕ್ಕೂಟ ವ್ಯವಸ್ಥೆ ಎಂದು ಬರೆಯಲಾಗಿದೆ ಎಂದು ಹೇಳುತ್ತಿದ್ದೀರಿ. ಹಾಗಾಗಿ ಭಾರತ ಒಂದು ರಾಷ್ಟ್ರವೇ ಅಲ್ಲ ಎನ್ನುತ್ತಿದ್ದೀರಿ. ಆದರೆ ಅದೇ ಪರಿಚ್ಛೇದದ ಮೊದಲ ಪುಟ ತಿರುವಿ ಹಾಕಿದರೆ ಸಾಕು, ಅದರ ಹಿಂದಿನ ಪುಟದಲ್ಲಿ ಭಾರತ ಒಂದು ದೇಶ ಎಂದು ಬರೆಯಲಾಗಿದೆ’ ಎಂದು ಹೇಳಿದರು.ಸಂವಿಧಾನವಷ್ಟೇ ಅಲ್ಲ. ಶತಮಾನಗಳ ಹಿಂದೆ ಚಾಣಕ್ಯ ಕೂಡ ಇದನ್ನೇ ಹೇಳಿದ್ದರು. ತಕ್ಷಶಿಲೆಯಲ್ಲಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸುವಾಗ ಭಾರತದಲ್ಲಿ ಇರುವವರೆಲ್ಲರೂ ಭಾರತ ವಾಸಿಗಳು, ಭಾರತ ವಾಸಿಗಳು ಇರುವ ನೆಲ ಭಾರತ ಎಂದು ಸ್ಪಷ್ಟವಾಗಿ ವಿವರಿಸಿದ್ದಾರೆ’ ಎಂದು ಸಿದ್ದಾರ್ಥ ತಿರುಗೇಟು ನೀಡಿದರು.
ಒಪ್ಪಿಗೆ ಪಡೆಯದ ರಾಹುಲ್?
ರಾಹುಲ್ ಗಾಂಧಿಯವರು ಕೇಂಬ್ರಿಡ್ಜ್ ವಿವಿಯ ಸಮಾರಂಭಕ್ಕಾಗಿ ಲಂಡನ್‌ಗೆ ತೆರಳಲು ವಿದೇಶಾಂಗ ಇಲಾಖೆಯಿಂದ ಒಪ್ಪಿಗೆಯನ್ನೇ ಪಡೆದಿಲ್ಲ ಎಂದು ಮೂಲಗಳು ತಿಳಿಸಿವೆ. ದೇಶದ ಎಲ್ಲ ಸಂಸದರು, ವಿದೇಶಗಳಿಗೆ ಪ್ರಯಾಣಿಸುವ ಮೂರು ವಾರಗಳ ಮುಂಚೆಯೇ ವಿದೇಶಾಂಗ ಇಲಾಖೆಯ ಒಪ್ಪಿಗೆ ಪಡೆಯಬೇಕು. ಅಲ್ಲದೆ, ವಿದೇಶಿ ಸರಕಾರಗಳ, ಸಂಘ-ಸಂಸ್ಥೆಗಳ ಆಹ್ವಾನ ನೇರವಾಗಿ ತಮಗೆ ಬಂದಿದ್ದರೆ ಅದನ್ನು ವಿದೇಶಾಂಗ ಇಲಾಖೆಯ ಗಮನಕ್ಕೆ ತಂದು ಆ ಕುರಿತ ಪ್ರಯಾಣಕ್ಕೆ ಒಪ್ಪಿಗೆ ಪಡೆಯಬೇಕು. ಇದ್ಯಾವುದನ್ನೂ ರಾಹುಲ್ ಗಾಂಧಿ ಪಾಲಿಸಿಲ್ಲ ಎಂದು ಮೂಲಗಳು ಹೇಳಿವೆ.