ಮುಂಬಯಿ : ರಾಹುಲ್ ಗಾಂಧಿ ನನ್ನ ನಾಯಕನಲ್ಲ; ನಾನು ಪ್ರಿಯಾಂಕಾ ಗಾಂಧಿ ಅವರ ನಾಯಕತ್ವಕ್ಕಾಗಿ ಕಾಯುತ್ತಿದ್ದೇನೆ ಎಂದು ಪಾಟಿದಾರ್ ಅನಾಮತ್ ಆಂದೋಲನ ಸಮಿತಿ (ಪಾಸ್) ನಾಯಕ ಹಾರ್ದಿಕ್ ಪಟೇಲ್ ಹೇಳಿದ್ದಾರೆ.
“ನಾನು ವೈಯಕ್ತಿಕ ಮಟ್ಟದಲ್ಲಿ ರಾಹುಲ್ ಗಾಂಧಿಯನ್ನು ಇಷ್ಟಪಡುತ್ತೇನೆ; ಆದರೆ ನಾನು ಆತನನ್ನು ನನ್ನ ನಾಯಕ ಎಂದು ಪರಿಗಣಿಸವುದಿಲ್ಲ; ಏಕೆಂದರೆ ಆತ ನನ್ನ ನಾಯಕನೇ ಅಲ್ಲ. ಪ್ರಿಯಾಂಕಾ ಗಾಂಧಿ ಅವರ ರಾಜಕೀಯ ಎಂಟ್ರಿಯನ್ನು ನಾನು ಕಾಯುತ್ತಿದ್ದೇನೆ; ಆಕೆ ರಾಜಕೀಯ ರಂಗಕ್ಕೆ ಬರಬೇಕು ಎಂದು ನಾನು ಬಯಸುತ್ತೇನೆ’ ಎಂದು ಹಾರ್ದಿಕ್ ಪಟೇಲ್ ಹೇಳಿದರು.
ಚುನಾವಣೆಗೆ ಸ್ಪರ್ಧಿಸುವ 25 ವರ್ಷ ಪ್ರಾಯದ ಅರ್ಹತೆಯನ್ನು ನಾನು ಹೊಂದಲಿರುವ ಹೊರತಾಗಿಯೂ 2019ರ ಲೋಕಸಭಾ ಚುನಾವಣೆಯಲ್ಲಿ ನಾನು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುವುದಿಲ್ಲ ಎಂದು ಹಾರ್ದಿಕ್ ಪಟೇಲ್ ಹೇಳಿದರು.
ಮೊತ್ತ ಮೊದಲು ನಾನು ಎಲ್ಲವನ್ನೂ ತಿಳಿಯಬಯಸುತ್ತೇನೆ; ಎಲ್ಲಕ್ಕಿಂತ ಮುಖ್ಯವಾಗಿ ಜನರು ಏನನ್ನು ಬಯಸುತ್ತಾರೆ; ಜನರಿಗೆ ಏನು ಬೇಕಾಗಿದೆ ಎಂಬುದನ್ನು ನಾನು ಚೆನ್ನಾಗಿ ತಿಳಿದುಕೊಳ್ಳಬೇಕಿದೆ ಎಂದು ಹಾರ್ದಿಕ್ ಹೇಳಿದರು.
ಕೊನೆಯದಾಗಿ ಪಟೇಲ್ ಹೇಳಿದರು : ನನಗೊಬ್ಬಳು ಗರ್ಲ್ ಫ್ರೆಂಡ್ ಇದ್ದಾಳೆ; ನಾನು ಆಕೆಯನ್ನು ಮದುವೆಯಾಗಲಿದ್ದೇನೆ !